-->

Terror Wall Writing Update | ಉಗ್ರ ಪರ ಗೋಡೆ ಬರಹ: ಸೌದಿಯಿಂದ ಸಹಕಾರ ನೀಡಿದಾತನ ಪತ್ತೆ, ಸ್ಲೀಪರ್ ಸೆಲ್ ಸಹಕಾರ?

Terror Wall Writing Update | ಉಗ್ರ ಪರ ಗೋಡೆ ಬರಹ: ಸೌದಿಯಿಂದ ಸಹಕಾರ ನೀಡಿದಾತನ ಪತ್ತೆ, ಸ್ಲೀಪರ್ ಸೆಲ್ ಸಹಕಾರ?





ಮಂಗಳೂರು: ಉಗ್ರ ಸಂಘಟನೆಗಳ ಪರ ಘೋಷಣೆಯ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಗುರುತಿಸಲಾಗಿದೆ. ಈತ ಸೌದಿಯಿಂದ ಕೂಡ ಈ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದ ಎನ್ನಲಾಗಿದೆ.



ಈಗಾಗಲೇ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ನೀಡಿದ ಮಾಹಿತಿಯ ಆಧಾರದಲ್ಲಿ ಈತನನ್ನು ಗುರುತಿಸಲಾಗಿದೆ. ಸೌದಿಯಿಂದ ಕುಳಿತು ಈ ಮೂವರು ಆರೋಪಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಈತನ ಬಂಧನಕ್ಕೆ ಈಗಾಗಲೇ ಪ್ರಯತ್ನ ಆರಂಭಿಸಲಾಗಿದೆ. ಈತನ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.





ಆರೋಪಿಗಳಿಗೆ ಉಗ್ರ ಸಂಘಟನೆಯೊಂದರ ಸ್ಲೀಪರ್ ಸೆಲ್ ಸಹಕಾರ ದೊರೆತಿರುವುದೂ ಗಮನಕ್ಕೆ ಬಂದಿದೆ. ಇದರ ಕಾರ್ಯವ್ಯಾಪ್ತಿ ಮತ್ತು ಶೈಲಿಯನ್ನು ಅಧ್ಯಯನ ಮಾಡಲಾಗಿದೆ.


ಸಂಘಟನೆಯೊಂದರ ಕುಮ್ಮಕ್ಕಿನಿಂದ ಗೋಡೆ ಬರಹ ಬರೆಯಲಾಗಿದೆ ಎಂಬುದು ಸ್ಪಷ್ಟಗೊಂಡಿದೆ.


ಈ ದುಷ್ಕೃತ್ಯಕ್ಕೆ ಬಳಸಿದ ಸಾಧನಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಅವುಗಳು ಈ ಪ್ರಕರಣದ ಮಹತ್ವದ ಸಾಕ್ಷ್ಯಗಳಾಗಿವೆ. ಜೊತೆಗೆ, ಪ್ರಕರಣ ಸಂಬಂಧ ಇನ್ನೊಬ್ಬ ಆರೋಪಿಯನ್ನೂ ಗುರುತಿಸಲಾಗಿದೆ. ಬಟ್ಟೆ ವ್ಯಾಪಾರಿ ಶಾರೀಕ್ ಎಂಬಾತ ಆಗಾಗ ಮಂಗಳೂರಿಗೆ ಬರುತ್ತಿದ್ದ. ಈಗ ಮಂಗಳೂರಿನ ಅಪಾರ್ಟ್‌ಮೆಂಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮುನೀರ್ ಅಹ್ಮದ್‌ನನ್ನು ಭೇಟಿ ಆಗುತ್ತಿದ್ದ ಎಂಬ ಮಾಹಿತಿಗಳು ಲಭ್ಯವಾಗಿದೆ.



ಆರೋಪಿ ಮಹಮ್ಮದ್ ಶಾರೀಕ್‌ಗೆ ಸೌದಿಯ ವ್ಯಕ್ತಿ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಈತ ಉಗ್ರ ಸಂಘಟನೆ ಜೊತೆ ಸಕ್ರಿಯ ಸಂಪರ್ಕ ಇಟ್ಟುಕೊಂಡಿದ್ದ ಎಂಬ ಬಗ್ಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಇದರ ಜೊತೆ ಗುಪ್ತಚರ ತಂಡಗಳು ಈ ಬಗ್ಗೆ ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.



ಶೀಘ್ರದಲ್ಲೇ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಎರಡು ಬಾರಿ ಎನ್‌ಐಎ ತಂಡ ಪ್ರತ್ಯೇಕವಾಗಿ ಆಗಮಿಸಿ ಮಾಹಿತಿ ಕಲೆ ಹಾಕಿರುವುದು ಗೊತ್ತಾಗಿದೆ. ಆದರೆ, ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ.



ಮಂಗಳೂರು ಪೊಲೀಸರ ತಂಡ ಸಮನ್ವಯದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article