ಮಂಗಳೂರು: ಶಾಲಾ ಮೈದಾನಕ್ಕೆ ಸೈಕಲ್ ಕಲಿಯಬೇಕು ಎಂದು ಬಂದಿದ್ದ ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಸಂಗ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ.
ಶಾಲಾ ಮೈದಾನಕ್ಕೆ ಸೈಕಲ್ ಕಲಿಯಲು ಬಂದಿದ್ದ ಬಾಲಕಿಯನ್ನು ಕೊಠಡಿಗೆ ಕರೆದೊಯ್ದು, ಆ ಬಳಿಕ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಬಗ್ಗೆ ದೂರು ದಾಖಲಾಗಿದ್ದು, ಶಾಲೆಯ ಆಡಳಿತಾಧಿಕಾರಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸುಳ್ಯದ ಪ್ರತಿಷ್ಠಿತ ಎಂದು ಹೇಳಲಾದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಹೆತ್ತವರ ದೂರಿನ ಮೇಲೆ ಆಡಳಿತಾಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.
ದೇವಚಳ್ಳ ಗ್ರಾಮದ ಎಲಿಮಲೆಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ತನ್ನ ಗೆಳತಿಯರ ಜೊತೆ ಸೈಕಲ್ ಕಲಿಯುತ್ತಿದ್ದ ವೇಳೆ ಶಾಲೆಯ ಆವರಣದಲ್ಲಿ ಇದ್ದ ಆಡಳಿತಾಧಿಕಾರಿ ಬಾಲಕಿಯನ್ನು ಕರೆದು ಸೈಕಲ್ ಕೊಡಿಸುವುದಾಗಿ ಪುಸಲಾಯಿಸಿದ್ದಾರೆ. ಆಕೆಗೆ ಆಮಿಷ ನೀಡಿ ಶಾಲಾ ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಬಾಲಕಿ ಈ ವಿಷಯವನ್ನು ತನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಶಾಲೆಯ ಆಡಳಿತ ಮಂಡಳಿಗೆ ಲಿಖಿತ ದೂರು ನೀಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಆಡಳಿತ ಮಂಡಳಿ, ಆರೋಪಿ ಆಡಳಿತಾಧಿಕಾರಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು ಸೇವೆಯಿಂದ ವಜಾ ಮಾಢಲಾಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಿಸದಂತೆ ಶಾಲಾ ಆಡಳಿತ ಮಂಡಳಿಯವರು ಹೆತ್ತವರ ಮನವೊಲಿಸಿದ್ದಾರೆ. ಇದರಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಈ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದಂತೆಯೇ, ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಚೈಲ್ಡ್ ಲೈನ್ ಸಂಸ್ಥೆಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಚೈಲ್ಡ್ ಲೈನ್ ಸಂಸ್ಥೆಯವರು ಸಂತ್ರಸ್ತ ಬಾಲಕಿಯನ್ನು ಪರೀಕ್ಷೆಗೊಳಪಡಿಸಿ ವರದಿ ನೀಡಲಿದ್ದು, ಕಿರುಕುಳ ಮೇಲ್ನೋಟಕ್ಕೆ ಸಾಬೀತಾದರೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವುದು ಖಚಿತ.
ಇದೇ ಶಾಲೆಯಲ್ಲಿ ಇಂತಹದ್ದೇ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಎರಡು ಪ್ರಕರಣಗಳು ದಾಖಲಾಗಿದ್ದವು. ಶಿಕ್ಷಕರೊಬ್ಬರು ಬಾತ್ ರೂಮ್ ನಲ್ಲಿ ವಿದ್ಯಾರ್ಥಿನಿಯ ಫೋಟೋ ಕ್ಲಿಕ್ಕಿಸಿ ಸುದ್ದಿಗೆ ಗ್ರಾಸವಾಗಿದ್ದರು. ಐದು ವರ್ಷಗಳ ಹಿಂದೆ ಶಿಕ್ಷಕಿಯೊಬ್ಬರು ಬೇರೊಬ್ಬರ ಜೊತೆ ಹೋಗಿದ್ದಾರೆ ಎಂಬ ಘಟನೆ ವಿವಾದ ಸೃಷ್ಟಿಯಾಗುವಂತೆ ಮಾಡಿತ್ತು.
