ಮಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಇನ್ನೊಂದು ಕೆಟ್ಟ ಸುದ್ದಿ. ಮಂಗಳೂರಿನ ಪೊಲೀಸ್ ಸಿಬ್ಬಂದಿಯೊಬ್ಬರು ಇದ್ದಕ್ಕಿದ್ದಂತೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಅವರ ನಾಪತ್ತೆ ಪ್ರಕರಣ ಪೊಲೀಸ್ ಇಲಾಖೆಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ 29 ವರ್ಷದ ಅನಿಲ್ ಕುಮಾರ್ ನಾಪತ್ತೆಯಾಗಿದ್ದು ಇಲಾಖೆಗೆ ತಲೆನೋವಾಗಿದೆ.
ಅಸೈಗೋಳಿಯ ಪೊಲೀಸ್ ಗೃಹದಿಂದ ಇವರು ನಿಗೂಢವಾಗಿ ಕಣ್ಮರೆಯಾಗಿದ್ಧಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯವರಾದ ಅನಿಲ್ ತಮ್ಮ ತಾಯಿ, ಪತ್ನಿ ಮತ್ತು ಪುತ್ರನೊಂದಿಗೆ ಅಸೈಗೋಳಿ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು.
ಬುಧವಾರ ಸಂಜೆಯಿಂದ ಅವರು ತಮ್ಮ ಸಹೋದ್ಯೋಗಿಗಳಿಗೆ ಮತ್ತು ಮೇಲಾಧಿಕಾರಿಗಳಿಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ.
ಕೌಟುಂಬಿಕ ವಿಚಾರದಲ್ಲಿ ತಾವು ಮನನೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬರ್ಥದ ಸಂದೇಶವನ್ನು ಅನಿಲ್ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.
ತನ್ನ ಪತ್ನಿಯು ಮನೆಯಲ್ಲಿ ಹಿರಿಯರೊಂದಿಗೆ ಜಗಳವಾಡಿ ತವರು ಮನೆ ಸೇರಿದ್ದು ಅನಿಲ್ ಅವರನ್ನು ಅತೀವವಾಗಿ ನೋವು ತರುವಂತೆ ಮಾಡಿತ್ತು ಎನ್ನಲಾಗಿದೆ. ತಾನು ಗಂಡನ ಜೊತೆ ಬರುವುದಿಲ್ಲ ಎಂದು ಖಡಕ್ ಆಗಿ ಪತ್ನಿ ಹೇಳಿರುವುದು ಕೋಮಲ ಹೃದಯದ ಅನಿಲ್ ಅವರ ಮನಸ್ಸಿಗೆ ಘಾಸಿಯಾಗುವಂತೆ ಮಾಡಿದೆ ಎಂಬುದು ಸ್ನೇಹಿತರ ಮಾತು.
ಎರಡು ದಿನಗಳಿಂದ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಕಠಿಣ ನಿರ್ಧಾರ ತೆಗೆದುಕೊಳ್ಳದಿರಲಿ, ಅವರು ವಾಪಸಾಗಲಿ ಎಂಬುದು ಎಲ್ಲರ ಹಾರೈಕೆ.