ಡೋರ್ ನಂಬರ್ ನೀಡಲು ರೈತರೊಬ್ಬರಿಂಚ ಲಂಚ ಸ್ವೀಕರಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಪೊಲೀಸರು ಕೋಳ ತೊಡಿಸಿದ್ದಾರೆ.
ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಕರಿ ಗ್ರಾಮದಲ್ಲಿ. ಇಲ್ಲಿನ ರೈತರೊಬ್ಬರು ಕದ ಸಂಖ್ಯೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಎಲ್ಲ ದಾಖಲೆಗಳನ್ನು ಲಗತ್ತಿಸಿದ್ದರೂ ಪಂಚಾಯತ್ ಪಿಡಿಓ ಹಣಕ್ಕಾಗಿ ಪೀಡಿಸುತ್ತಿದ್ದ.
ಇದರಿಂದ ಬೇಸತ್ತ ಆ ಬಡಪಾಯಿ ರೈತ ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪರ್ಕಿಸಿದ್ದರು. ಅವರ ನಿರ್ದೇಶನದಂತೆ ಟ್ರ್ಯಾಪ್ ರೆಡಿಯಾಯಿತು.
ಭ್ರಷ್ಟ ಅಧಿಕಾರಿ ಬೇಡಿಕೆ ಇಟ್ಟಂತೆ 15 ಸಾವಿರ ರೂ ಹಣವನ್ನು ಶನಿವಾರ ಪಂಚಾಯತ್ ಅಧಿಕಾರಿ ಕೃಷ್ಣಪ್ಪ ಯಲಗಲಿ ಅವರಿಗೆ ನೀಡುತ್ತಿದ್ದಂತೆಯೇ ಪೊಲೀಸರು ಕ್ಷಣಾರ್ಧದ ಕಾರ್ಯಾಚರಣೆ ನಡೆಸಿ ಆರೋಪಿ ಅಧಿಕಾರಿಯನ್ನು ಬಂಧಿಸಿದರು.
ಎಸಿಬಿ ಡಿವೈಎಸ್‌ಪಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು. ಪಿಡಿಓ ಬಗ್ಗೆ ಈ ಹಿಂದೆಯೂ ಸಾಕಷ್ಟು ದೂರಗಳು ಕೇಳಿಬಂದಿತ್ತು. ಇದೀಗ ಆರೋಪಿ ಕೃಷ್ಣಪ್ಪ ಸಾಕ್ಷಿ ಸಮೇತ ಸಿಕ್ಕಿಬಿದ್ದು, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.