ಮಂಗಳೂರು: ಹೊಸ ಮಾದರಿಯ ಕೋವಿಡ್ ಮಹಾಮಾರಿ ಭೀತಿ ಇರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ತಣ್ಣೀರು ಬಿದ್ದಿದೆ. ಇದಕ್ಕೆ ಬರೆ ಎಳೆದಂತೆ, ಜಿಲ್ಲೆಯ ಪ್ರಮುಖ ಬೀಚ್‌ಗಳಿಗೆ ಮೀನುಗಾರರನ್ನು ಹೊರತುಪಡಿಸಿ ನಾಗರಿಕರ ನಿರ್ಬಂಧಕ್ಕೆ ನಿಷೇಧಾಜ್ಞೆ ಹೇರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 31ರ ಮಧ್ಯಾಹ್ನ 12 ಗಂಟೆಯಿಂದ ಜನವರಿ ಮಧ್ಯಾಹ್ನ 12 ಗಂಟೆ ವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಜಿಲ್ಲಾ ದಂಡಾಧಿಕಾರಿಯಾಗಿ ತಮ್ಮ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಯವರು ಈ ಆದೇಶಕ್ಕೆ ಸಹಿ ಹಾಕಿದ್ದಾರೆ.
ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರ ಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್‌ಗಳಿಗೆ ಈ ಆದೇಶ ಅನ್ವಯವಾಗಲಿದೆ.
ಇದೇ ವೇಳೆ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಈ ಕುರಿತ ಆದೇಶ ಹೊರಡಿಸಿದ್ದಾರೆ. ಐದು ಜನರಿಗಿಂತ ಹೆಚ್ಚು ಸೇರಬಾರದು, ಪಾರ್ಕ್ ಅಥವಾ ಮೈದಾನದಲ್ಲಿ ಯಾವುದೇ ರೀತಿಯ ಹೊಸ ವರ್ಷಾಚರಣೆ ಕಾರ್ಯಕ್ರಮ ಮಾಡುವಂತಿಲ್ಲ.
ಹೊಟೇಲ್, ಮಾಲ್, ರೆಸ್ಟೋರೆಂಟ್, ಪಬ್, ಕ್ಲಬ್ ಹಾಗೂ ಇತರ ಕಡೆಗಳಲ್ಲಿ ಡಿಜೆ, ಸಂಗೀತ ರಸಸಂಜೆ, ನೃತ್ಯ ಹಾಗೂ ಇತರ ಮೋಜು ಮಸ್ತಿಗೆ ಅವಕಾಶ ಇಲ್ಲ. ಆದರೆ, ಸಾಮಾನ್ಯ ವ್ಯವಹಾರಗಳನ್ನು ನಡೆಸಬಹುದಾಗಿದೆ.