ಬೆಂಗಳೂರು: ಸ್ಥಿರಾಸ್ತಿ ವಿವಾದವೊಂದರಲ್ಲಿ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದಾಖಲಾತಿ ನೀಡುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟೀಸ್ ನೀಡಿದ ಪ್ರಕರಣದ ಸಂಬಂಧ ವಿಜಯನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಂ. ಭರತ್ ಮತ್ತು ಸಬ್ ಇನ್ಸ್‌ಪೆಕ್ಟರ್ ಜಿ.ಎಚ್. ಸಂತೋಷ್ ಅವರಿಗೆ ಹೈಕೋರ್ಟ್ ಬೆವರಿಳಿಸಿದೆ.
ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಬಾರದು ಎಂಬ ನ್ಯಾಯಾಲಯ ಹಲವು ಪ್ರಕರಣಗಳಲ್ಲಿ ನಿರ್ದೇಶನ ನೀಡಿದೆ. ಆದರೂ ಪೊಲೀಸರು ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ. ಇವತ್ತು ವಕೀಲರಿಗೆ ನೋಟೀಸ್ ನೀಡುತ್ತೀರಿ. ನಾಳೆ ನ್ಯಾಯಾಧೀಶರಿಗೂ ನೋಟೀಸ್ ಕೊಟ್ಟು ಠಾಣೆಗೆ ಬರಲು ಹೇಳುತ್ತೀರಿ. ಪೊಲೀಸ್ ಅಧಿಕಾರಿಗಳಾಗಿ ನಿಮ್ಮ ಕೆಲಸವೇನು? ನೀವು ಮಾಡುತ್ತಿರುವುದೇನು..? ಎಂದು ಹೈಕೋರ್ಟ್ ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಆಗಿರುವಾಗಲೇ ವಕೀಲರಿಗೆ ನೋಟೀಸ್ ನೀಡುತ್ತೀರಾ...? ಇನ್ನು ಡಿಸಿಪಿ, ಎಸಿಪಿ, ಐಜಿಪಿ ಆದರೆ ಕಥೆ ಏನ್ರಿ.. ಇದೇನು ಕರ್ನಾಟಕವೋ ಅಥವಾ ಬಿಹಾರವೋ...? ಎಂದು ಹೈಕೋರ್ಟ್ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಬಿ. ವೀರಪ್ಪ ಅವರು ಪೊಲೀಸರನ್ನು ಹೀಗೆ ತರಾಟೆಗೆ ತೆಗೆದುಕೊಂಡರು.
ಪೊಲೀಸರು ತಮಗೆ ನೀಡಿದ ನೋಟೀಸ್ ರದ್ದುಪಡಿಸುವಂತೆ ಕೋರಿ ವಕೀಲರಾದ ಸುಧಾಕರ್ ಅವರು ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್, ಈ ಕುರಿತು ವಿವರ ನೀಡುವಂತೆ ಸರ್ಕಾರಿ ವಕೀಲರಿಗೆ ಹೈಕೋರ್ಟ್ ಸೂಚಿಸಿತ್ತು.
ಅರ್ಜಿ ವಿಚಾರಣೆಗೆ ಬಂದ ವೇಳೆ, ವಿಜಯನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಅವರಿಗೆ ಖುದ್ದು ಹಾಜರಾಗಲು ಹೆಚ್ಚುವರಿ ಅಡ್ವಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.