Ganja Pedlers arrested | ತರಕಾರಿ ಮಧ್ಯೆ ಮಂಗಳೂರು, ಕಾಸರಗೋಡಿಗೆ ಡ್ರಗ್ಸ್ ಕಳ್ಳಸಾಗಣೆ: ನಾಲ್ವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ





ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ತರಕಾರಿ ಮಧ್ಯೆ ಡ್ರಗ್ಸ್ ಇಟ್ಟು ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ.


ಬಂಧಿತರಲ್ಲಿ ಕರಾವಳಿ ಮೂಲದ ವ್ಯಕ್ತಿಯೂ ಇದ್ದಾನೆ. ದಕ್ಷಿಣ ಕನ್ನಡ ಮೂಲದ ಪ್ರೀತಿ ಪಾಲ್(೪೮), ಕೆ. ಖಲಂದರ್(೩೧) ಉತ್ತರ ಪ್ರದೇಶದ ಅಮಿತ್ ಕುಮಾರ್ ಮತ್ತು ಸೂರಜ್ ಬಂಧಿತ ಪೆಡ್ಲರ್‌ಗಳು.



ಆರೋಪಿಗಳು ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದರು. ಈ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಈ ಗಾಂಜಾವನ್ನುಸಂಸ್ಕರಿಸಿ, ಬಳಿಕ ಸ್ವರಾಜ್ ಮಜ್ದ ವಾಹನದಲ್ಲಿ ಬೆಂಗಳೂರಿಗೆ ತರಲಾಗುತ್ತಿತ್ತು.




ಅದಾದ ನಂತರ ಈ ಗಾಂಜಾವನ್ನು ಪ್ಯಾಕೇಟ್‌ ನಲ್ಲಿ ತುಂಬಿಸಿ ತರಕಾರಿ ಮಧ್ಯೆ ಇಟ್ಟು ಮಂಗಳೂರು ಮತ್ತು ಕಾಸರಗೋಡಿಗೆ ತರಲಾಗುತ್ತಿತ್ತು.



ಚೆಕ್‌ ಪೋಸ್ಟ್‌ಗಳಲ್ಲಿ ತರಕಾರಿ ಎಂದು ಪೊಲಿಸರು ಈ ವಾಹನಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಕಳೆದ ಒಂದು ವರ್ಷದಿಂದ ಕರಾವಳಿಗೆ ರಾಜಾರೋಷವಾಗಿ ಗಾಂಜಾ ತರಕಾರಿಗಳ ಮಧ್ಯೆ ಹರಿದುಬರುತ್ತಿತ್ತು.



ಮಂಗಳೂರಿನ ಪ್ರತಿಷ್ಠಿತ ಕಾಲೇಜ್‌ ಕ್ಯಾಂಪಸ್, ಸಾಫ್ಟ್‌ವೇರ್ ಕಂಪೆನಿಗಳು ಮತ್ತು ಐಷಾರಾಮಿ ಹೊಟೇಲ್‌ಗಳನ್ನು ಗುರಿಯಾಗಿರಿಸಿ ಗಾಂಜಾವನ್ನು ಮಾರ್ಕೆಟ್ ಮಾಡಲಾಗುತ್ತಿತ್ತು.



ಬಂಧಿತ ಆರೋಪಿಗಳಿಂದ ಬೃಹತ್ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಬೆಂಗಳೂರು ಆಗ್ನೇಯ ವಲಯದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಜೋಷಿ ಇಮುಂಗಾರುವಿಗೆ ತಿಳಿಸಿದ್ದಾರೆ.