ಈಕೆ ಈಗಿನ್ನೂ ಡಿಗ್ರಿ ಶಿಕ್ಷಣ ಮುಗಿಸಿಲ್ಲ. ಎರಡನೇ ವರ್ಷದ ಪದವಿ ಓದುತ್ತಿರುವಾಗಲೇ ಈಕೆಗೆ ದೊಡ್ಡ ಜವಾಬ್ದಾರಿಯೊಂದು ಒಲಿದಿದೆ. ಅದುವೇ ಮೇಯರ್ ಪದವಿ. ಅದೂ ದೇಶದ ಪ್ರತಿಷ್ಠಿತ ಮಹಾನಗರ ಪಾಲಿಕೆಗಳಲ್ಲೊಂದಾದ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಪದವಿ.
ಇಂತಹ ಭಾಗ್ಯ ಯಾರಿಗುಂಟು ಯಾರಿಗಿಲ್ಲ...? ಅಂದ ಹಾಗೆ, ಈಕೆಯ ಹೆಸರು ಆರ್ಯ ರಾಜೇಂದ್ರನ್. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್ಯ, ಮುಂದಿನ ಕೆಲ ದಿನಗಳಲ್ಲಿ ನಡೆಯಲಿರುವ ಮೇಯರ್ ಪದವಿಗೆ ಎಡರಂಗದಿಂದ ಶಿಫಾರಸುಗೊಂಡ ಅಭ್ಯರ್ಥಿಯಾಗಿದ್ದಾರೆ.
ತಿರುವನಂತಪುರಂ ಮಹಾ ನಗರ ಪಾಲಿಕೆಯ ಮುದವನ್‌ಮುಗಲ್ ವಾರ್ಡ್‌ನಿಂದ ಸ್ಪರ್ಧಿಸಿದ್ದ ಈಕೆ 2872 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿಯನ್ನು 549 ಮತಗಳಿಂದ ಸೋಲಿಸಿದ್ದಾರೆ.
ಈಕೆ ಆಲ್ ಸೈಂಟ್ಸ್ ಕಾಲೇಜಿನ ಎರಡನೇ ವರ್ಷದ ಡಿಗ್ರಿ ಸ್ಟೂಡೆಂಟ್.
ಶನಿವಾರ ನಡೆದ ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಮೇಯರ್ ಹುದ್ದೆಗೆ ಈಕೆಯ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಸರ್ವಾನುಮತದಿಂದ ಈಕೆಯನ್ನು ಈ ಪ್ರತಿಷ್ಠಿತ ಹುದ್ದೆಗೆ ಅಭ್ಯರ್ಥಿಯನ್ನಾಗಿ ಅನುಮೋದಿಸಲಾಗಿದೆ.
ಇತ್ತೀಚಿನ ಚುನಾವಣೆ ಆರ್ಯ ಪಾಲಿಗೆ ಅಭ್ಯರ್ಥಿಯಾಗಿ ಮಾತ್ರವಲ್ಲ ಒಬ್ಬ ಮತದಾರೆಯಾಗಿಯೂ ಮೊದಲ ಚುನಾವಣೆಯಾಗಿತ್ತು. ಈ ಮೊದಲ ಚುನಾವಣೆಯಲ್ಲೇ ಈ ರೀತಿಯ ದಾಖಲೆ ಬರೆದು ಆರ್ಯ ದೇಶದ ಗಮನ ಸೆಳೆದಿದ್ದಾರೆ.
ಇದಕ್ಕೂ ಮೊದಲು ಸುಮನ್ ಕೊಲಿ ಎಂಬವರು ತಮ್ಮ 21ನೇ ವರ್ಷದಲ್ಲಿ ರಾಜಸ್ತಾನದ ಭರತ್‌ಪುರ ಮಹಾನಗರ ಪಾಲಿಕೆಯ ಮೇಯರ್ ಆಗಿ 2009ರಲ್ಲಿ ದಾಖಲೆ ಬರೆದಿದ್ದರು. 2017ರಲ್ಲಿ, ನೂತನ್ ರಾಥೋಡ್ ತಮ್ಮ 31ನೇ ವರ್ಷದಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಮೇಯರ್ ಹುದ್ದೆ ಅಲಂಕರಿಸಿದ್ದರು. 1995ರಲ್ಲಿ ಸಂಜಯ್ ನಾಯಕ್ ತಮ್ಮ 23ನೇ ವಯಸ್ಸಿನಲ್ಲಿ ದೇಶದ ಪ್ರತಿಷ್ಠಿತ ಮಹಾನಗರ ಪಾಲಿಕೆಯಾದ ನವಿ ಮುಂಬೈಯಲ್ಲಿ ಮೇಯರ್ ಆಗಿ ಕಿರಿಯ ಪ್ರಾಯದಲ್ಲೇ ಹುದ್ದೆ ಅಲಂಕರಿಸಿದ್ದರು. ಇದೀಗ ಆರ್ಯ ರಾಜೇಂದ್ರನ್ ಈ ಕಿರಿಯ ವಯಸ್ಸಿನ ಮೇಯರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಬಾಲ ಸಂಘಂ ಎಂಬ ಸಂಘಟನೆಯ ರಾಜ್ಯ ಅಧ್ಯಕ್ಷೆಯೂ ಆಗಿರುವ ಆರ್ಯ ರಾಜೇಂದ್ರನ್, ಸಿಪಿಎಂನ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಕೂಡ ಆಗಿದ್ದಾರೆ.
ಬಾಲ್ಯದಿಂದಲೇ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಆರ್ಯ ಈಗ ಎಡಪಕ್ಷಗಳ ಪಾಲಿಗೆ ಮತ್ತೊಂದು ಐಕಾನ್ ರಾಜಕಾರಣಿ ಆಗಿದ್ದಾರೆ.