ಮಂಗಳೂರು: ನಗರದ ಹೃದಯಭಾಗದಲ್ಲಿ ನಡೆದ ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಆರೋಪಿಗಳ ಪೈಕಿ ಒಬ್ಬನನ್ನು ಕುದ್ರೋಳಿ ನಿವಾಸಿ ಮಹಮ್ಮದ್ ನವಾಜ್ ಎಂದು ಗುರುತಿಸಲಾಗಿದೆ.
30 ವರ್ಷದ ಈತ ಅಪ್ರಾಪ್ತ ಬಾಲಕನ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾರೆ. ಆರೋಪಿಗಳ ಪೈಕಿ ಒಬ್ಬಾತ ಕಳೆದ ವರ್ಷ ಡಿಸೆಂಬರ್ 19ಕ್ಕೆ ಎನ್.ಆರ್.ಸಿ ಮತ್ತು ಸಿಎಎ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲೀಬಾರ್‌ನಲ್ಲಿ ಮೃತಪಟ್ಟ ನೌಶೀನ್ ಎಂಬಾತನ ಸಂಬಂಧಿ.
ಹಾಗಾಗಿ, ಈ ಗೋಲೀಬಾರ್‌ಗೆ ಪ್ರತೀಕಾರವಾಗಿ ಈತ ತನ್ನ ಅನುಚರರ ಜೊತೆ ಸೇರಿ ಪೊಲೀಸ್ ಅಧಿಕಾರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರಬಹುದು ಎಂದು ಊಹಿಸಲಾಗಿದೆ.
ಡಿಸೆಂಬರ್ 16ರಂದು ಬಂದರ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಗಣೇಶ್ ಕಾಮತ್ ಮೇಲೆ ಹಲ್ಲೆ ನಡೆದಿತ್ತು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಕತ್ತಿ ಸಹಿತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅಪ್ರಾಪ್ತ ಬಾಲಕನಾಗಿದ್ದು, ಈತ ನೌಶೀನ್ ಗೆ ಸಂಬಂಧಿ ಎಂದು ಹೇಳಲಾಗಿದೆ.