ಉಡುಪಿ: ಉಡುಪಿ ಲೋಕಾಯುಕ್ತ ಠಾಣೆಯಲ್ಲಿ ದಿನಾಂಕ 15/03/2011ರಂದು ಕುಂದಾಪುರ ತಾಲೂಕು ತೆಕ್ಕಟೆ ಗ್ರಾಮದ ವಿಕ್ರಮ ಕಾಮತ್ ಇವರ ದೂರಿನ ಮೇರೆಗೆ ಅ.ಕ್ರ 04/2011, ಕಲಂ 7,13(1)(ಡಿ) ಜೊತೆಗೆ 13(2) ಲಂಚ ನಿರೋಧ ಕಾಯ್ದೆ 1988 ರಂತೆ ಪ್ರಕರಣ ದಾಖಲಾಗಿತ್ತು.
ಕುಂದಾಪುರ ತಾಲೂಕು ತೆಕ್ಕಟೆ ಗ್ರಾಮದ ವಿಕ್ರಮ ಕಾಮತ್ ಎಂಬವರ ತಾಯಿ ಮೋಹಿನಿ ಹೆಸರಿಗೆ ತೆಕ್ಕಟ್ಟೆ ಗ್ರಾಮದ ಸರ್ವೆ ನಂಬ್ರ 231/2ಸಿ ಯಲ್ಲಿ 10 ಸೆಂಟ್ಸ್ ಸ್ಥಳ ಇದ್ದು ಸದ್ರಿ ಸ್ಥಳದ ಜಾಗದಲ್ಲಿ ಹೊಸ ಮನೆಯನ್ನು ಕಟ್ಟುವ ಸಲುವಾಗಿ ಜಾಗದ ಭೂಪರಿವರ್ತನೆ ಬಗ್ಗೆ ಅರ್ಜಿದಾರರ ತಾಯಿ ತೆಕ್ಕಟ್ಟೆ ಗ್ರಾಮ ಕರಣಿಕರ ಕಛೇರಿಗೆ ಹೋಗಿ ಗ್ರಾಮ ಕರಣಿಕರಾದ ಮಂಜುನಾಥ ಹೆಚ್.ಆರ್ ರವರಲ್ಲಿ ವಿಚಾರಿಸಿದಾಗ ಜಾಗದ ಭೂಪರಿವರ್ತನೆ ಮಾಡಲು ರೂ 15,000-00 ಖರ್ಚು ಇದೆ ಎಂಬುದಾಗಿ ತಿಳಿಸಿ ಮುಂಗಡ ರೂ 8,000-00 ಹಣ ವನ್ನು ಮೊದಲೇ ಪಡೆದು ನಂತರ ಅರ್ಜಿದಾರರು ಆಪಾದಿತರಲ್ಲಿ ವಿಚಾರಿಸಿದಾಗ ಕನ್‌ವರ್ಷನ್ ಪೇಪರ್ ರೆಡಿ ಇದೆ ಅದನ್ನು ಕೊಡಲು ಲಂಚದ ಹಣ ರೂ. 7000/-ವನ್ನು ಕೊಡಬೇಕೆಂದು ಬೇಡಿಕೆ ಸಲ್ಲಿಸಿದ್ದರು.
ಕರ್ನಾಟಕ ಲೋಕಾಯುಕ್ತ ಉಡುಪಿ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕರಾದ ಶ್ರೀ ಸಿ.ಇ ತಿಮ್ಮಯ್ಯ ರವರು ಶ್ರೀ ವಿಕ್ರಮ ಕಾಮತ್ ಇವರ ದೂರನ್ನು ದಾಖಲಿಸಿಕೊಂಡು ಆರೋಪಿತರನ್ನು ಹಣ ಸ್ವೀಕರಿಸಿದ ಸಮಯ ಬಲೆ ಬೀಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಈ ಪ್ರಕರಣದಲ್ಲಿ ಅಂದಿನ ಪೊಲೀಸ್ ನಿರೀಕ್ಷಕರಾದ ಶ್ರೀ ಸಿ.ಇ ತಿಮ್ಮಯ್ಯ ರವರು ತನಿಖೆಯನ್ನು ಪೂರ್ತಿಗೊಳಿಸಿ ಮಾನ್ಯ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ನಂತರ ಈ ಪ್ರಕರಣವು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಶೆಶನ್ಸ್ ನ್ಯಾಯಾಲಯ ಕುಂದಾಪುರಕ್ಕೆ ವರ್ಗಾವಣೆಗೊಂಡು ವಿಚಾರಣೆಗೆ ಒಳಪಟ್ಟು ದಿನಾಂಕ: 25/11/2020 ರಂದು ಗೌರವಾನ್ವಿತ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ನರಹರಿ ಪ್ರಭಾಕರ ಮರಾಠೆ ಇವರು ಅಪರಾಧಿ ಮಂಜುನಾಥ.ಹೆಚ್.ಆರ್ ರವರಿಗೆ ಕಲಂ 7, ರಲ್ಲಿ ರೂ. 10,000/- ದಂಡ ಮತ್ತು 1 ವರ್ಷ ಶಿಕ್ಷೆ ಮತ್ತು ಕಲಂ 13(2) ರಲ್ಲಿ ರೂ 20,000-00 ಮತ್ತು 2 ವರ್ಷ ಒಟ್ಟು 3 ವರ್ಷ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪನ್ನು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ. ಇಂದ್ರಾಳಿ ವಿಜಯ್ ಕುಮಾರ್ ಶೆಟ್ಟಿ ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.
