ಬಂಟ್ವಾಳ: ಪ್ರಸಕ್ತ 100 ಹಾಸಿಗೆ ಸೌಲಭ್ಯ ಹೊಂದಿರುವ ಸಾರ್ವಜನಿಕ ಆಸ್ಪತ್ರೆಗೆ ಎಲ್ಲಾ ವಿಭಾಗದ ವೈದ್ಯರು ಸಹಿತ ಖಾಸಗಿ ಸಹಭಾಗಿತ್ವದಲ್ಲಿ ಗರಿಷ್ಟ ಮಟ್ಟದ ಸೌಲಭ್ಯ ಒದಗಿಸಲಾಗಿದ್ದು, ಇದೀಗ ಲಯನ್ಸ್ ಕ್ಲಬ್ ವತಿಯಿಂದ ಎರಡು ಅತ್ಯಾಧುನಿಕ 'ಶೈತ್ಯಾಗಾರ' ಸೇರ್ಪಡೆಗೊಂಡಿರುವುದು ಜನತೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ಲಯನ್ಸ್ ಕ್ಲಬ್ ವತಿಯಿಂದ ರೂ 3.5ಲಕ್ಷ ವೆಚ್ಚದ ನೂತನ 'ಶೈತ್ಯಾಗಾರ' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನಗೊಳಿಸಿ ಅವರು ಮಾತನಾಡಿದರು.
ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾ ಪ್ರಕಾಶ್ ಶೈತ್ಯಾಗಾರ ಉದ್ಘಾಟಿಸಿ ಮಾತನಾಡಿ, ಅಂತರ್ ರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಸಮಾಜ ಸೇವೆಯನ್ನು ಉಸಿರನ್ನಾಗಿಸಿಕೊಂಡಿದೆ ಎಂದರು.
ಲಯನ್ಸ್ ಸೇವೆ ಬದುಕಿಗೆ ಪ್ರೇರಣೆ: ಮಾಜಿ ಸಚಿವ ರೈ
ಮಾಜಿ ಸಚಿವ ಬಿ.ರಮಾನಾಥ ರೈ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಸಮಾಜ ಸೇವೆಗೆ ಲಯನ್ಸ್ ಕ್ಲಬ್ ಅತ್ಯುನ್ನತ ದಾರಿಯಾಗಿ ನೆಮ್ಮದಿಯ ಬದುಕಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಪ್ರಾಂತೀಯ ಅಧ್ಯಕ್ಷ ಬಿ.ಸಂಜೀವ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಮತ್ತೆ ಎರಡು ಶೈತ್ಯಾಗಾರ ಬೇರೆ ಸಮುದಾಯ ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು ಎಂದರು.
ಮಾಜಿ ಜಿಲ್ಲಾ ಗವರ್ನರ್ ಹರಿಕೃಷ್ಣ ಪುನರೂರು, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ವೈದ್ಯಾಧಿಕಾರಿ ಡಾ.ಪುಷ್ಪಲತಾ ಶೂಬ ಹಾರೈಸಿದರು.
ಪ್ರಥಮ ಉಪ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಕ್ಯಾಬಿನೆಟ್ ಕಾರ್ಯದರ್ಶಿ ಸಿ.ಪಿ.ದಿನೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಕೃಷ್ಣಶ್ಯಾಮ್, ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ಮನೋರಂಜನ್ ಕೆ.ಆರ್., ಪ್ರಮುಖರಾದ ರಾಧಾಕೃಷ್ಣ ರೈ, ಎನ್.ಸತೀಶ ಕುಡ್ವ, ಸುನಿಲ್ ಭಂಡಾರಿಬೆಟ್ಟು, ಉಮೇಶ ಆಚಾರ್, ಕೆ.ವೈಕುಂಠ ಕುಡ್ವ, ಡಾ.ವಸಂತ ಬಾಳಿಗಾ, ದಾಮೋದರ ಬಿ.ಎಂ., ದಿಶಾ ಆಶೀರ್ವಾದ್ ಮತ್ತಿತರರು ಇದ್ದರು.
ದಿವ್ಯಾ ವಸಂತ ಶೆಟ್ಟಿ ಸ್ವಾಗತಿಸಿ, ಬಿ.ಶಿವಾನಂದ ಬಾಳಿಗಾ ಪ್ರಾಸ್ತಾವಿಕ ಮಾತನಾಡಿದರು. ಮಧ್ವರಾಜ್ ಬಿ.ಕಲ್ಮಾಡಿ ವಂದಿಸಿದರು. ರಾಧಾಕೃಷ್ಣ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.
