-->
Film Review | ಅರಿಷಡ್ವರ್ಗ: ಅಪೂರ್ವ ಅನುಭೂತಿ ನೀಡಿದ ಸಿನಿಮಾ !

Film Review | ಅರಿಷಡ್ವರ್ಗ: ಅಪೂರ್ವ ಅನುಭೂತಿ ನೀಡಿದ ಸಿನಿಮಾ !
ಚಿತ್ರ ವಿಮರ್ಶೆ: ಶಶಿರಾಜ್ ರಾವ್ ಕಾವೂರ್


ಆಲ್‌ಮೋಸ್ಟ್ ಒಂದು ವರ್ಷ ಅಂತರದ ನಡುವೆ ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿದ್ದಕ್ಕೋ ಅಥವಾ ಅಪೂರ್ವಕ್ಕೊಂದು ಒಳ್ಳೆಯ ಕನ್ನಡ ಸಿನೆಮಾ ಬೆಳ್ಳಿತೆರೆಯಲ್ಲಿ ನೋಡಿದ್ದಕ್ಕೋ ಏನೋ.. ಅಂತೂ ನಿನ್ನೆ ಸಂಜೆ ನಾನು ಒಂದು ದಿವ್ಯಾನುಭೂತಿಗೆ ಒಳಗಾಗಿದ್ದು ಅಂತೂ ಸತ್ಯ.

ಹೆಸರು - ಅರಿಷಡ್ವರ್ಗ.. ನಿರ್ದೇಶಕರು- ಅರ್ವಿಂದ್ ಕಾಮತ್.ಮೇಲ್ನೋಟಕ್ಕೆ ಒಂದು ಪತ್ತೆದಾರಿ ಕೊಲೆ ಕೇಸು ಇತ್ಯರ್ಥದ ಕತೆ. ಆದರೆ ಕತೆಯ ಒಳಗೆ ಬಹಳಷ್ಟು ಒಳಾರ್ಥಗಳನ್ನು ನಿರ್ದೇಶಕರು ಅದೆಷ್ಟು ನಾಜೂಕಾಗಿ ಪೋಣಿಸಿದ್ದಾರೆಂದರೆ ಇದನ್ನು ಇನ್ನೊಮ್ಮೆ ನೋಡಬೇಕು ಅನ್ನುವಷ್ಟರ ಮಟ್ಟಿಗೆ ಥ್ರಿಲ್ ಹುಟ್ಟಿಸುತ್ತಾರೆ ಅವರು. ಮಲಯಾಳಂ ಮತ್ತು ತಮಿಳು ಮರ್ಡರ್ ಮಿಸ್ಟರಿ ಸಿನೆಮಾಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಚಿತ್ರ ಸಾಗುವ ಪರಿ ನಿಜಕ್ಕೂ ರೋಚಕ ಅನುಭವ ಸಿನೆಮಾ ನೀಡುತ್ತಾ ಹೊತ್ತು ಹೋದದ್ದೇ ತಿಳಿಯುವುದಿಲ್ಲ.ಸಿನೆಮಾದ ಧನಾತ್ಮಕ ಅಂಶಗಳೇ ಸಿನೆಮಾವನ್ನು ಎತ್ತರಕ್ಕೆ ಏರಿಸಿತು. ಅದರಲ್ಲಿ ಬಹಳ ಮುಖ್ಯವಾಗಿ ಹಿನ್ನೆಲೆ ಸಂಗೀತ (RR), ಕಲಾವಿದರ ಸಹಜಾಭಿನಯ, ಛಾಯಾಗ್ರಹಣ ಮತ್ತು ಸಂಕಲನ. ಈ ನಾಲ್ಕೂ ಒಂದಕ್ಕೊಂದು ಎಷ್ಟು ಪೂರಕವಾಗಿತ್ತೆಂದರೆ ಕನ್ನಡ ಸಿನೆಮಾಗಳಿಗೆ ಇಂತಹುದೇ ಬೇಕು ಅನ್ನಿಸುತ್ತದೆ. ಪೋಲೀಸ್ ಇನ್ ಪೆಕ್ಟರ್ ಅಂತೂ ಸಿನೆಮಾದ ಉದ್ದಕ್ಕೂ ಮೌನದಲ್ಲೆ ಮೆರೆಯುತ್ತಾರೆ. ಗಡಸು ಧ್ವನಿ, ತೀಕ್ಷ್ಣ ನೋಟಗಳಿಂದ ಸಿನೆಮಮಂದಿರದ ಹೊರಗೆ ಹೋದ ಮೇಲೂ ಕಾಡುತ್ತಾರೆ. ಉಳಿದಂತೆ ನಾಯಕ, ನಾಯಕಿ, ಆಟೋ ಡ್ರೈವರ್, ಕಾನ್‌ಸ್ಟೇಬಲ್, ಕೆಲಸದಾಕೆ, ರಂಜಿತ್ ಎಲ್ಲರೂ ಅಭಿನಯದಲ್ಲಿ ಸಹಜತೆ ಕಾದುಕೊಂಡಿದ್ದಾರೆ. ಅವಿನಾಶ್ ಮತ್ತು ಅವರ ಎರಡನೆ ಪತ್ನಿಯ ಪಾತ್ರ ಮಾಡಿದವರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ನಾನಂತೂ ಈ ರೀತಿಯ ಕಾಸ್ಟಿಂಗ್ ಗೆ ಫುಲ್ ಮಾರ್ಕ್ ಕೊಡುತ್ತೇನೆ. 


ಸಾಮಾನ್ಯವಾಗಿ ಪೋಲೀಸ್ ತನಿಖೆಯ ಮಜಲುಗಳು ಜನಸಾಮಾನ್ಯರಿಗೆ ತೀರಾ ಅಪರಿಚಿತ ಮತ್ತು ಅಷ್ಟೇ ಕುತೂಹಲ ಮೂಡಿಸುವ ವಿಷಯಗಳಾಗಿರುತ್ತವೆ. ಹಾಗಾಗಿ ಅಂತಹ ವಿಷಯಾಧಾರಿತ ಕತೆ ಮತ್ತು ಸಣ್ಣ ಸಣ್ಣ ಸುಳಿವುಗಳನ್ನು ಹಿಂಬಾಲಿಸುತ್ತಾ ಹೋಗುವ ನಿರೂಪಣೆಯ ಸಿನೆಮಾ ಆಕರ್ಷಕವಾಗಿಯೇ ಇರುತ್ತವೆ. ಇಲ್ಲಿ ಅದೇ ಸೂತ್ರ ಬಳಸಿದ್ದಾರೆ ಮತ್ತು ಅದರಲ್ಲಿ ಗೆದ್ದಿದ್ದಾರೆ.ಸಿನೆಮ ಕೇವಲ ಸಿನೆಮಾವಾಗಿರದೆ ಅಂಡರ್ ಕರೆಂಟ್ ಕಂಟೆಂಟ್ ಇದ್ದರೆ ಅದು ಕಲಾತ್ಮಕ ಸಿನೆಮಾಗಳ ಸಾಲಿಗೆ ಸೇರುತ್ತದೆ. ಆದರೆ ಇಲ್ಲಿ ಅಂತಹದೊಂದು ಸಂಚಲನ ಇದ್ದರೂ ಇದು ಮಾಸ್ ಆಡಿಯನ್ಸ್‌ನ್ನು ಸುಲಭವಾಗಿ ತಲುಪುವ ಗುಣವನ್ನೂ ಹೊಂದಿದೆ. ಮನುಷ್ಯ ಸಹಜ ಬಲಹೀನತೆಗಳು, ಅವುಗಳಿಂದ ಹೊರಬರಲಾಗದೆ ಚಟಪಡಿಸುವವರು, ಲೋಭ, ಮೋಹದ ಮೋಡಿಗೆ ಒಳಗಾದವರು ಎಲ್ಲರೂ ಇಲ್ಲಿ ಇಣುಕು ಹಾಕುತ್ತಾರೆ. 


ಕನ್ನಡಿಗರಿಗೆ ಅಭಿಮಾನ ಪಡುವಂತಹ ಸಿನೆಮಾವನ್ನು ಪೋಣಿಸಿ ಕೊಟ್ಟದ್ದಕ್ಕೆ ನಿರ್ದೇಶಕ ಅರ್ವಿಂದ್ ಕಾಮತ್ ಮತ್ತು ಅವರ ಸಮಸ್ತ ಗೆಳೆಯರ ಗುಂಪಿಗೆ ಅಭಿನಂದನೆ ಸಲ್ಲಿಸುತ್ತೇನೆ.ಈ ಸಿನೆಮಾವನ್ನು ಕನ್ನಡ ಸಿನಿಮಾ ಪ್ರೇಮಿಗಳು ಗೆಲ್ಲಿಸಲಿ ಎಂದು ಪ್ರೀತಿಯಿಂದ ಹಾರೈಸುವೆ.

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg