ಮಂಗಳೂರು: ನವದುರ್ಗ ಫಿಲ್ಮ್ಸ್ ಲಾಂಛನದಡಿ ಕೊಡುಗೈ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ನಿರ್ಮಾಣದಲ್ಲಿ, ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಕನ್ನಡ ಚಲನಚಿತ್ರ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ಯ ಟೀಸರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಟೋ ಚಾಲಕರ ಸ್ವಾಭಿಮಾನದ ಕಥೆ – ಜ. 15ಕ್ಕೆ ಬಿಡುಗಡೆ:
ರಿಕ್ಷಾ ಚಾಲಕರು ಅಸಹಾಯಕರಲ್ಲ, ಅವರು ಸ್ವಾಭಿಮಾನಿಗಳು ಎಂಬ ಕಥಾಹಂದರವನ್ನು ಹೊಂದಿರುವ ಈ ಕುಟುಂಬ ಸಮೇತ ವೀಕ್ಷಿಸಬಹುದಾದ ಹಾಸ್ಯಮಯ ಚಿತ್ರವನ್ನು ಅಖಿಲ ಕರ್ನಾಟಕ ಆಟೋ ರಿಕ್ಷಾ ಚಾಲಕರಿಗೆ ಅರ್ಪಣೆ ಮಾಡಲಾಗಿದೆ ಎಂದು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದ್ದಾರೆ. "ಈವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದು, ಕನ್ನಡದಲ್ಲಿ ಇದು ನನ್ನ ಎರಡನೇ ಚಿತ್ರವಾಗಿದೆ. ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರ ಪರಿಚಯವಾಗಿ, ಅವರಿಗೆ ಕಥೆ ಇಷ್ಟವಾದ್ದರಿಂದ ಈ ಸಿನಿಮಾ ಸಾಕಾರಗೊಂಡಿದೆ. ಜನವರಿ 15ರಂದು ರಾಜ್ಯಾದ್ಯಂತ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಚಿತ್ರ ತೆರೆಕಾಣಲಿದೆ" ಎಂದರು.
54 ದಿನಗಳ ಚಿತ್ರೀಕರಣ; ಹಾಡಿಗೆ ₹1 ಕೋಟಿ ವೆಚ್ಚ:
ನಿರ್ಮಾಣ ಮೇಲ್ವಿಚಾರಕಿ ಹಾಗೂ ಅಭಿಮತ ಟಿವಿ ಮುಖ್ಯಸ್ಥೆ ಡಾ. ಮಮತಾ ಪಿ. ಶೆಟ್ಟಿ ಮಾತನಾಡಿ, "ಸಿನಿಮಾ ಕ್ಷೇತ್ರ ಹಲವು ಕುಟುಂಬಗಳಿಗೆ ಆಸರೆಯಾಗಿದ್ದು, ನಿರ್ಮಾಪಕರು ಕಲಾವಿದರಿಗೆ ಅನ್ನದಾತರಾಗಿದ್ದಾರೆ. ಕಲಾವಿದರ ಕಷ್ಟಸುಖಗಳಿಗೆ ಸ್ಪಂದಿಸುವ ಉದ್ದೇಶದಿಂದ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 54 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಚಿತ್ರತಂಡಕ್ಕೆ ಯಾವುದೇ ಕೊರತೆಯಾಗದಂತೆ ಸಹಕರಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಪಕರಿಗಾಗಿ ಕಾದಿದ್ದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರ ಶ್ರಮಕ್ಕೆ ಈ ಚಿತ್ರದಿಂದ ತಕ್ಕ ಫಲ ಸಿಗಲಿದೆ" ಎಂದು ಶುಭ ಹಾರೈಸಿದರು.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಒಂದು ಹಾಡಿನ ಚಿತ್ರೀಕರಣಕ್ಕಾಗಿಯೇ ₹1 ಕೋಟಿ ವೆಚ್ಚ ಮಾಡಲಾಗಿದೆ. ಹೊಸ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಚಿತ್ರಕ್ಕೆ ಎ.ಕೆ. ಕಾರ್ಲ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಗಣ್ಯರಿಂದ ಟೀಸರ್‌ಗೆ ಮೆಚ್ಚುಗೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಟೀಸರ್ ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಇಸ್ಮಾಯಿಲ್ ಅವರ ಎರಡನೇ ಕನ್ನಡ ಚಿತ್ರವೂ ಜನಮನ ಗೆಲ್ಲಲಿ ಎಂದರು. ಪಣಂಬೂರು ಠಾಣಾ ಇನ್ಸ್‌ಪೆಕ್ಟರ್ ಸಲೀಮ್ ಅಬ್ಬಾಸ್ ವಲಾಲ್ ಹಾಗೂ ನ್ಯಾಯವಾದಿ ಅರುಣ್ ಬಂಗೇರ ಅವರು ಟೀಸರ್ ಗುಣಮಟ್ಟವನ್ನು ಶ್ಲಾಘಿಸಿ ಚಿತ್ರದ ಯಶಸ್ಸಿಗೆ ಹಾರೈಸಿದರು.
ತಾರಾಗಣ ಮತ್ತು ತಾಂತ್ರಿಕ ವರ್ಗ:
ಚಿತ್ರದ ಮುಖ್ಯ ತಾರಾಗಣದಲ್ಲಿ ದೀಪಕ್ ರೈ ಪಾಣಾಜೆ, 'ಬಿಗ್ ಬಾಸ್' ಖ್ಯಾತಿಯ ಸಂಗೀತಾ ಶೃಂಗೇರಿ, ಹೃದನ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಮೈಮ್ ರಾಮ್‌ದಾಸ್, ಉಮೇಶ್ ಮಿಜಾರ್, ಅನಿಲ್ ರಾಜ್ ಉಪ್ಪಳ, ಮಾನಸಿ ಸುಧೀರ್, ಸಾಯಿಕೃಷ್ಣ ಹಾಗೂ ಸತೀಶ್ ಬಂದಲೆ ಸೇರಿದಂತೆ ಕರಾವಳಿಯ ಹೆಸರಾಂತ ಹಾಸ್ಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ಶಮೀರ್ ಮುಡಿಪು ಸಂಗೀತ ಸಂಯೋಜಿಸಿದ್ದಾರೆ.
ಸಮಾರಂಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ತಮ್ಮ ಲಕ್ಷ್ಮಣ್, ಅಡ್ಯಾರ್ ಮಾಧವ ನಾಯ್ಕ್, ಸತೀಶ್ ಬಂದಲೆ, ಪಮ್ಮಿ ಕೊಡಿಯಾಲ್‌ಬೈಲ್, ಡಾ. ಅಬೂಬಕರ್ ಸಿದ್ದಿಕ್ ಅಡ್ಡೂರು, ಡಾ. ಕಿರಣ್ ಕುಮಾರ್, ಎನ್. ನಾಗರಾಜ್, ಶರಣ್ ರಾಜ್ ಕಾಸರಗೋಡು, ನಿತಿನ್ ರೈ ಕುಕ್ಕುವಳ್ಳಿ, ಪತ್ರಕರ್ತರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಬಾಳ ಜಗನ್ನಾಥ ಶೆಟ್ಟಿ, ಶಮೀರ್ ಮುಡಿಪು, ಎ.ಕೆ. ಕಾರ್ಲ ಮೊದಲಾದವರು ಉಪಸ್ಥಿತರಿದ್ದರು. ಷಷ್ಠೀಶ್ ಪಿ. ಶೆಟ್ಟಿ ಸ್ವಾಗತಿಸಿ, ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.


