ಪತ್ನಿ ಅಗಲಿ 8 ವರ್ಷವಾದರೂ ಮಾಸದ ಪ್ರೀತಿ: ನಿತ್ಯ ಆಟೋಗೆ ಹೂವು ಮುಡಿಸಿ ಫೋಟೋ ಇಟ್ಟು ನೆನೆಯುವ ಬೆಂಗಳೂರಿನ ಅಜ್ಜ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವೃದ್ಧ ಆಟೋ ಚಾಲಕನ ಅಪರೂಪದ ಪ್ರೇಮಕಥೆ; ನೆಟ್ಟಿಗರ ಕಣ್ತುಂಬಿಸಿದ ವೀಡಿಯೋ!
ಬೆಂಗಳೂರು: "ಪ್ರೀತಿಗೆ ಸಾವಿಲ್ಲ" ಎಂಬ ಮಾತಿಗೆ ನೈಜ ಉದಾಹರಣೆಯಂತಿರುವ ಹೃದಯಸ್ಪರ್ಶಿ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತಮ್ಮ ಧರ್ಮಪತ್ನಿ ನಿಧನರಾಗಿ ಎಂಟು ವರ್ಷಗಳೇ ಕಳೆದಿದ್ದರೂ, ಇಂದಿಗೂ ಪ್ರತಿದಿನ ಆಟೋವನ್ನು ಹೂವಿನಿಂದ ಅಲಂಕರಿಸಿ, ಪತ್ನಿಯ ಫೋಟೋವನ್ನು ಮುಂಭಾಗದಲ್ಲಿಟ್ಟುಕೊಂಡು ವಾಹನ ಚಲಾಯಿಸುವ ವೃದ್ಧ ಆಟೋ ಚಾಲಕರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರ ಮನ ಮುಟ್ಟಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಸೂರಜ್ ಎಸ್. ಕುರುಪ್ ಎಂಬುವವರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ.
ಪ್ರತಿದಿನದ ಕಾಯಕ ಮತ್ತು ಪ್ರೀತಿಯ ಸಂಕೇತ:
ಸೂರಜ್ ಅವರು ಆಟೋ ಹತ್ತಿದಾಗ ಮುಂಭಾಗದಲ್ಲಿ ಅಂದವಾಗಿ ಹೂವುಗಳನ್ನು ಇರಿಸಿರುವುದನ್ನು ಗಮನಿಸಿ, "ಈ ಹೂವುಗಳು ಯಾರಿಗಾಗಿ?" ಎಂದು ಚಾಲಕರನ್ನು ವಿಚಾರಿಸಿದ್ದಾರೆ. ಅದಕ್ಕೆ ನಗುಮುಖದಿಂದಲೇ ಪ್ರತಿಕ್ರಿಯಿಸಿದ ವೃದ್ಧ ಚಾಲಕರು, ಅಲ್ಲೇ ಪಕ್ಕದಲ್ಲಿದ್ದ ತಮ್ಮ ಪತ್ನಿಯ ಫೋಟೋವನ್ನು ತೋರಿಸಿ, "ಇವರು ನನ್ನ ಪತ್ನಿ, ತೀರಿಕೊಂಡು 8 ವರ್ಷಗಳಾಯಿತು" ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಒಬ್ಬ ಮಗ, ಮಗಳು ಹಾಗೂ ಆರು ಮಂದಿ ಮೊಮ್ಮಕ್ಕಳಿದ್ದರೂ ಮನೆಯಲ್ಲಿ ಏಕೆ ವಿಶ್ರಾಂತಿ ಪಡೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಮನೆಯಲ್ಲಿ ಸುಮ್ಮನೆ ಕುಳಿತರೆ ಹಳೆಯ ನೆನಪುಗಳು, ಯೋಚನೆಗಳು ಜಾಸ್ತಿಯಾಗುತ್ತವೆ. ಅದಕ್ಕಾಗಿ ಪ್ರತಿದಿನ ಆಟೋ ಓಡಿಸುತ್ತಾ, ಬರುವ ಪ್ರಯಾಣಿಕರೊಂದಿಗೆ ಮಾತನಾಡುತ್ತಾ ಸಮಯ ಕಳೆಯುತ್ತೇನೆ" ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ನೆಟ್ಟಿಗರ ಮನಗೆದ್ದ ಅಪ್ಪಟ ಪ್ರೇಮ:
ಪ್ರತಿದಿನ ಬೆಳಿಗ್ಗೆ ಆಟೋವನ್ನು ಶುಚಿಗೊಳಿಸಿ, ಮಾರುಕಟ್ಟೆಯಿಂದ ತಾಜಾ ಹೂವುಗಳನ್ನು ತಂದು ಪತ್ನಿಯ ಭಾವಚಿತ್ರಕ್ಕೆ ಮುಡಿಸುವುದನ್ನು ಈ ವೃದ್ಧ ಚಾಲಕರು ತಮ್ಮ ದಿನಚರಿಯನ್ನಾಗಿಸಿಕೊಂಡಿದ್ದಾರೆ.
ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು "ಇದು ನಿಜವಾದ ಪ್ರೀತಿ", "ಸಾವಿನ ಆಚೆಗೂ ಉಳಿಯುವ ಪ್ರೇಮಕ್ಕೆ ಇದೇ ಸಾಕ್ಷಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, "ನಮ್ಮ ಮನೆಯ ಪಕ್ಕದಲ್ಲೇ ಇವರು ವಾಸವಿದ್ದು, ನಿತ್ಯ ಬೆಳಿಗ್ಗೆ ಆಟೋಗೆ ಹೂವಿಟ್ಟು ಪೂಜಿಸುವ ಅವರ ನಿಷ್ಠೆಯನ್ನು ನಾವು ನಿತ್ಯ ನೋಡುತ್ತೇವೆ" ಎಂದು ಬರೆದುಕೊಂಡಿದ್ದಾರೆ.
