ಹಾಸಿಗೆಯಲ್ಲಿ ಮಲಗಿ ಗಂಟೆಗಟ್ಟಲೆ ಸ್ಕ್ರಾಲ್ ಮಾಡುತ್ತಿದ್ದ ನಟಿಗೆ ಕುತ್ತಿಗೆ ನರಗಳ ಶಸ್ತ್ರಚಿಕಿತ್ಸೆ; ಹೆತ್ತವರಿಗೆ ವಿಶೇಷ ಸಲಹೆ!
ವಿಶೇಷ ವರದಿ:
ಇಂದಿನ ಗ್ಯಾಜೆಟ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್ ಬಳಕೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಇದೇ ಫೋನ್ ಅತಿಯಾದ ಬಳಕೆ ನಮ್ಮ ದೇಹ ಹಾಗೂ ಕುತ್ತಿಗೆಯ ಮೇಲೆ ಎಷ್ಟು ಭೀಕರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ನಟಿ ಶಕೀಲಾ ಅವರ ಪ್ರಸಂಗವೇ ಸಾಕ್ಷಿ. ಸತತವಾಗಿ ಮೊಬೈಲ್ ಬಳಸಿದ ಪರಿಣಾಮ ಕುತ್ತಿಗೆಯ ನರಗಳ ತೀವ್ರ ಸಮಸ್ಯೆಗೆ ತುತ್ತಾದ ನಟಿ ಶಕೀಲಾ, ಬರೋಬ್ಬರಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಮರಳಿರುವ ಶಕೀಲಾ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ಅನುಭವಿಸಿದ ನರಕಯಾತನೆ ಹಾಗೂ ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಹಾಸಿಗೆಯಲ್ಲಿ ಮಲಗಿ ಗಂಟೆಗಟ್ಟಲೆ ಫೋನ್ ಬಳಸುತ್ತಿದ್ದೆ!:
ಯೂಟ್ಯೂಬ್ ವೀಡಿಯೋದಲ್ಲಿ ಕುತ್ತಿಗೆಗೆ ಬೆಂಬಲ ನೀಡುವ ನೆಕ್ ಬ್ಯಾಂಡ್ ಧರಿಸಿರುವ ಶಕೀಲಾ, ಹಾಸಿಗೆಯಿಂದ ಎದ್ದು ಊಟ ಮಾಡಲು ಇನ್ನೊಬ್ಬರ ಸಹಾಯ ಪಡೆಯುವ ದೃಶ್ಯಗಳಿವೆ. ತಮಗಾದ ಸಮಸ್ಯೆಯನ್ನು ತಮಾಷೆಯ ಧಾಟಿಯಲ್ಲೇ ವಿವರಿಸಿದ ಅವರು, "ಸದಾ ಹಾಸಿಗೆಯ ಮೇಲೆಯೇ ಮಲಗಿಕೊಂಡು ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುವ ಅಭ್ಯಾಸ ನನಗಿತ್ತು. ಈ ಅತಿಯಾದ ಬಳಕೆಯಿಂದಾಗಿ ನನ್ನ ಕುತ್ತಿಗೆಯ ನರಗಳ ಮೇಲೆ ತೀವ್ರ ಪರಿಣಾಮ ಬೀರಲು ಶುರುವಾಯಿತು. ನೋವು ತಡೆಯಲಾಗದೆ ಕೊನೆಗೆ ಸರ್ಜರಿ ಮಾಡಿಸಿಕೊಳ್ಳಬೇಕಾಯಿತು" ಎಂದಿದ್ದಾರೆ.
ಅಲ್ಲದೆ ಈ ಚಿಕಿತ್ಸೆಗಾಗಿ ತಮ್ಮ ಜೇಬಿನಿಂದ ಬರೋಬ್ಬರಿ 3 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
"ಮಕ್ಕಳಿಗೆ ಮೊಬೈಲ್ ಕೊಡಬೇಡಿ, ನಿಯಂತ್ರಣವಿರಲಿ":
ತಮಗಾದ ದೈಹಿಕ ಹಾಗೂ ಆರ್ಥಿಕ ನಷ್ಟದ ಅನುಭವವನ್ನು ಹಂಚಿಕೊಂಡ ಶಕೀಲಾ, ಸಾರ್ವಜನಿಕರಿಗೆ ವಿಶೇಷ ಮನವಿ ಮಾಡಿದ್ದಾರೆ.
"ಫೋನ್ ಖಂಡಿತವಾಗಿಯೂ ನಮಗೆ ಉಪಯುಕ್ತವಾದ ಸಾಧನ. ಆದರೆ ಅದನ್ನು ಅತಿಯಾಗಿ ಬಳಸಬೇಡಿ. ಅದರಲ್ಲೂ ಹೆತ್ತವರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದನ್ನು ತಕ್ಷಣವೇ ನಿಯಂತ್ರಿಸಬೇಕು. ಪೋಷಕರು ಕೂಡ ದಿನಪೂರ್ತಿ ಅನಗತ್ಯ ವೀಡಿಯೋಗಳನ್ನು, ರೀಲ್ಸ್‌ಗಳನ್ನು ನೋಡುತ್ತಾ ಸಮಯ ಕಳೆಯುವ ಬದಲು ಅಗತ್ಯವಿದ್ದಷ್ಟೇ ಬಳಸಿ" ಎಂದು ಎಚ್ಚರಿಸಿದ್ದಾರೆ.
ಶಕೀಲಾ ಅವರ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದ್ದು, ನಿರಂತರವಾಗಿ ಗೇಮ್ಸ್ ಹಾಗೂ ರೀಲ್ಸ್ ವೀಕ್ಷಿಸುವ ಮೊಬೈಲ್ ಚಟವುಳ್ಳವರಿಗೆ ಇದು ದೊಡ್ಡ ಜಾಗೃತಿಯ ಗಂಟೆಯಾಗಿದೆ. ಅಭಿಮಾನಿಗಳು ಶಕೀಲಾ ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತಿದ್ದಾರೆ.
