ಮಹಿಳಾ ಅಧಿಕಾರಿಗಳೊಂದಿಗೆ ಸಲಿಗೆ ಬೆಳೆಸಿ ದೈಹಿಕ ಸಂಪರ್ಕ, ಬ್ಲ್ಯಾಕ್​ಮೇಲ್! ಕೃಪಲಾನಿಯ ಕಾಮಕಾಂಡ ಬಯಲು





ಬೆಂಗಳೂರು: ಮಹಿಳಾ ಕಸ್ಟಮ್ಸ್ ಅಧಿಕಾರಿಯನ್ನೇ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಪುಲಿಕೇಶಿನಗರ ಪೊಲೀಸರಿಂದ ಬಂಧಿತನಾಗಿರುವ ಕೃಪಲಾನಿ ಎಂಬಾತನ ವಿಚಾರಣೆ ವೇಳೆ ಪೊಲೀಸರೇ ಬೆಚ್ಚಿಬೀಳುವ ಸತ್ಯಗಳು ಹೊರಬಂದಿವೆ.

ಈತ ಕೇವಲ ಒಬ್ಬರನ್ನಲ್ಲ, ಸುಮಾರು 50ಕ್ಕೂ ಅಧಿಕ ಮಂದಿ ಮಹಿಳಾ ಅಧಿಕಾರಿಗಳನ್ನು ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಮಹಿಳಾ ಅಧಿಕಾರಿಗಳೊಂದಿಗೆ ಸಲಿಗೆ ಬೆಳೆಸಿ ದೈಹಿಕ ಸಂಪರ್ಕ ಮಾಡಿ ನಂತರ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಆ ಮೂಲಕ ತನ್ನ ಕುಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪವಿದೆ.

ಆರೋಪಿ ಕೃಪಲಾನಿ ಮುಖ್ಯವಾಗಿ ಜಿಎಸ್‌ಟಿ  ಮತ್ತು ಕಸ್ಟಮ್ಸ್ ವಿಭಾಗದ ಮಹಿಳಾ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಆರಂಭದಲ್ಲಿ ಕೆಲಸದ ನಿಮಿತ್ತ ಅಧಿಕಾರಿಗಳೊಂದಿಗೆ ಸಲುಗೆ ಬೆಳೆಸುತ್ತಿದ್ದ ಈತ, ಬಳಿಕ ಡಿನ್ನರ್, ಲಂಚ್ ಎಂದು ಆಪ್ತನಾಗುತ್ತಿದ್ದ. ನಂತರ ಪ್ರೀತಿ ಮತ್ತು ಮದುವೆಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಅಷ್ಟಕ್ಕೇ ಸುಮ್ಮನಾಗದೆ, ಆ ದೈಹಿಕ ಸಂಪರ್ಕವನ್ನೇ ಬಂಡವಾಳವಾಗಿಸಿಕೊಂಡು ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಿದ್ದ.

ಪುರುಷ ಅಧಿಕಾರಿಗಳನ್ನೂ ಕೃಪಲಾನಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಮೊದಲು ಅಧಿಕಾರಿಗಳ ಕಾರ್ಯವೈಖರಿ ಮತ್ತು ಇಲಾಖೆಯ ಒಳಗಿನ ಲೋಪದೋಷಗಳನ್ನು ತಿಳಿದುಕೊಳ್ಳುತ್ತಿದ್ದ ಈತ, ಅದನ್ನು ಇಟ್ಟುಕೊಂಡು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದ. ಮಹಿಳಾ ಅಧಿಕಾರಿಗಳ ಜತೆ ಲೈಂಗಿಕ ಸಂಪರ್ಕದ ನಂತರ ವಿಡಿಯೋ ಅಥವಾ ಫೋಟೋಗಳನ್ನು ಬಳಸಿ ಬೆದರಿಕೆ ಹಾಕುತ್ತಿದ್ದ ಈತ, ಅಧಿಕಾರಿಗಳನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದ ಎಂಬ ಆರೋಪವಿದೆ.

ವಿಚಾರಣೆ ನಡೆಯುತ್ತಿರುವಾಗಲೂ ಈತನ ಉದ್ಧಟತನ ಮುಂದುವರಿದಿದೆ. ಮೆಡಿಕಲ್ ಟೆಸ್ಟ್ ಮಾಡಿಸುವ ವೇಳೆ ಆಸ್ಪತ್ರೆಯಲ್ಲಿ ರಂಪಾಟ ಮಾಡಿರುವ ಆರೋಪಿ, ಪೊಲೀಸರ ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪುಲಿಕೇಶಿನಗರ ಎಸಿಪಿ ಗೀತಾ ನೇತೃತ್ವದಲ್ಲಿ ಈ ಗಂಭೀರ ಪ್ರಕರಣದ ತನಿಖೆ ಚುರುಕಿನಿಂದ ಸಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu