ನವದೆಹಲಿ: ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ವಜಾಗೊಂಡಿದ್ದ ಸಂಸದ ರಾಘವ್ ಚಡ್ಡಾ ಅವರು ಸಂಸದರಾದ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿ ಎಎಪಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ.
ಸಂಸದರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, "ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ ಮೂರನೇ ಎರಡರಷ್ಟು ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ'' ಎಂದು ಹೇಳಿದ್ದಾರೆ.
ಪಂಜಾಬ್‌ನಿಂದ ರಾಜ್ಯಸಭಾ ಸಂಸದರಾಗಿರುವ ರಾಘವ್ ಚಡ್ಡಾ ಆಪ್ ನಿಂದ ಅಂತರ ಕಾಯ್ದುಕೊಂಡಿದ್ದರು. ವೃತ್ತಿಯಲ್ಲಿ ಚಾರ್ಟಡ್್ರ ಅಕೌಂಟೆಂಟ್ ಆಗಿರುವ ಚಡ್ಡಾ, ದೆಹಲಿ ಜಲ ಮಂಡಳಿಯ ಮಾಜಿ ಉಪಾಧ್ಯಕ್ಷರಾಗಿದ್ದರು. ಪಾಠಕ್ ಮತ್ತು ಮಿತ್ತಲ್ ಅವರು ಚಡ್ಡಾ ಅವರೊಂದಿಗೆ ಪಕ್ಷ ತೊರೆದಿರುವುದು ಆಮ್ ಆದ್ಮ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ.
"ನಾನು ನನ್ನ ರಕ್ತ ಮತ್ತು ಬೆವರಿನಿಂದ ಪೋಷಿಸಿ, ನನ್ನ ಯೌವನದ 15 ವರ್ಷಗಳನ್ನು ನೀಡಿದ ಆಮ್ ಆದ್ಮ ಪಕ್ಷ ತನ್ನ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ವಿಮುಖವಾಗಿದೆ. ಈಗ ಈ ಪಕ್ಷವು ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ, ಬದಲಾಗಿ ಅದರ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ, ತಪ್ಪು ಪಕ್ಷದಲ್ಲಿ ನಾನು ಸರಿಯಾದ ವ್ಯಕ್ತಿ ಎಂದು ನನಗೆ ಅನಿಸುತ್ತಿದೆ. ಆದ್ದರಿಂದ, ಇಂದು, ನಾನು ಆಮ್ ಆದ್ಮ ಪಕ್ಷದಿಂದ ದೂರ ಸರಿಯುತ್ತಿದ್ದೇನೆ ಮತ್ತು ಸಾರ್ವಜನಿಕರಿಗೆ ಹತ್ತಿರವಾಗುತ್ತಿದ್ದೇನೆ ಎಂದು ಘೋಷಿಸುತ್ತೇವೆ'' ಎಂದು ಚಡ್ಡಾ ಹೇಳಿದ್ದಾರೆ.
ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಕ್ಷಿ ಕೂಡ ಎಎಪಿ ತೊರೆದು ಬಿಜೆಪಿಗೆ ಸೇರುತ್ತಾರೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.
"ರಾಜ್ಯಸಭೆಯಲ್ಲಿ 10ಮಂದಿ ಎಎಪಿ ಸಂಸದರಿದ್ದಾರೆ. ಅವರಲ್ಲಿ 2/3 ಕ್ಕಿಂತ ಹೆಚ್ಚು ಮಂದಿ ನಮ್ಮೊಂದಿಗಿದ್ದಾರೆ. ಅವರು ಸಹಿ ಮಾಡಿದ್ದಾರೆ ಮತ್ತು ಶುಕ್ರವಾರ ಬೆಳಗ್ಗೆ ನಾವು ಸಹಿ ಮಾಡಿದ ಪತ್ರ ಮತ್ತು ದಾಖಲೆಗಳನ್ನು ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಅವರಲ್ಲಿ ಮೂವರು ನಿಮ್ಮ ಮುಂದೆ ಇದ್ದೇವೆ. ನಮ್ಮೊಂದಿಗೆ, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಕ್ಷಿ ಮತ್ತು ಸ್ವಾತಿ ಮಲಿವಾಲ್ ಇದ್ದಾರೆ" ಎಂದು ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.