2ಮಕ್ಕಳ ತಾಯಿಯ ಬ್ಲ್ಯಾಕ್‌ಮೇಲ್‌ಗೆ ಜಿಮ್ ಟ್ರೈನರ್ ಬಲಿ? ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಯುವಕ!



ಬೆಂಗಳೂರು: ಜಿಮ್‌ಗೆ ಬರುತ್ತಿದ್ದ ವಿವಾಹಿತೆಯ ಬ್ಲ್ಯಾಕ್‌ಮೇಲ್ ಹಾಗೂ ಕಿರುಕುಳ ತಾಳಲಾರದೆ ಜಿಮ್ ಟ್ರೈನರ್ ದಿಲೀಪ್ (28) ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಈ ಮೂಲಕ, ಇಬ್ಬರು ಮಕ್ಕಳ ತಾಯಿಯ ಸಹವಾಸ ಮಾಡಿದ ಜಿಮ್ ಟ್ರೈನರ್ ಸಾವಿಗೆ ಶರಣಾಗುವಂತಾಗಿದೆ.

ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಿರುಕುಳ ನೀಡುತ್ತಿದ್ದ ಮಹಿಳೆಗೆ ವೀಡಿಯೋ ಕಾಲ್ ಮಾಡಿ ಸಾವಿನ ನಿರ್ಧಾರವನ್ನು ತಿಳಿಸಿ ಪ್ರಕರಣದ ಬಗ್ಗೆ ಹಲವು ಅನುಮಾನ ಮೂಡಿಸಿದೆ.

ನೆಲಮಂಗಲ ತಾಲೂಕಿನ ವಾಜರಹಳ್ಳಿಯ ನಿವಾಸಿ ದಿಲೀಪ್ ವೃತ್ತಿಯಲ್ಲಿ ಜಿಮ್ ಟ್ರೈನರ್. 28ವರ್ಷದ ಈತನಿಗೆ ತಾನು ಕೆಲಸ ಮಾಡುತ್ತಿದ್ದ ಜಿಮ್‌ಗೆ ಫಿಟ್ನೆಸ್‌ಗಾಗಿ ಬರುತ್ತಿದ್ದ ಯೋಗಿತಾ ಎಂಬ 42ವರ್ಷದ ಮಹಿಳೆಯ ಪರಿಚಯವಾಗಿತ್ತು. ಈ ಪರಿಚಯ ಸಲುಗೆಗೆ ತಿರುಗಿ ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ. ಒಂದು ವರ್ಷದ ಹಿಂದೆಯೇ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ಸುಖಾಂತ್ಯಗೊಂಡಿತ್ತು. ಆದರೂ ಯೋಗಿತಾ ಪಟ್ಟು ಬಿಡದೆ ದಿಲೀಪ್ ಬೆನ್ನು ಹತ್ತಿ ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

ಮೃತ ದಿಲೀಪ್ ತಂದೆ ರಮೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಯೋಗಿತಾ ತನ್ನ ಪುತ್ರನಿಗೆ ವಿಪರೀತ ಚಿತ್ರಹಿಂಸೆ ನೀಡುತ್ತಿದ್ದಳು. ದಿಲೀಪ್ ಹೆಸರಿನಲ್ಲಿದ್ದ ಮನೆಯನ್ನು ತನ್ನ ಪುತ್ರನ ಹೆಸರಿಗೆ ಬರೆದುಕೊಡುವಂತೆ ಟಾರ್ಚರ್ ನೀಡುತ್ತಿದ್ದಳು. ಇದರಿಂದ ಮನನೊಂದ ಅವಮು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ದೂರಿದ್ದಾರೆ.

ದಿಲೀಪ್ ನೇಣಿಗೆ ಶರಣಾಗುವ ಮುನ್ನ ಯೋಗಿತಾಳಿಗೆ ವಿಡಿಯೋ ಕಾಲ್ ಮಾಡಿದ್ದ. ಇದರಿಂದ ಗಾಬರಿಗೊಂಡ ಯೋಗಿತಾ, ದಿಲೀಪ್ ಸಹೋದರಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಷಯ ತಿಳಿಸಿದ್ದಾಳೆ. ತಕ್ಷಣ ಕುಟುಂಬಸ್ಥರು ಆತನ ರೂಮಿನ ಬಾಗಿಲು ಮುರಿದು ನೋಡಿದಾಗ ದಿಲೀಪ್ ನೇಣಿನ ಕುಣಿಕೆಯಲ್ಲಿ ಒದ್ದಾಡುತ್ತಿದ್ದರು. ತಕ್ಷಣ ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಿಲೀಪ್ ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu