ವಿಶಾಖಪಟ್ಟಣ: 2022ರಲ್ಲಿ ದೆಹಲಿಯಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ಲ್ಲಿದ್ದ ಮಹಾರಾಷ್ಟ್ರ ಮೂಲದ ಶ್ರದ್ಧಾ ವಾಲ್ಕರ್ ಎಂಬ ಯುವತಿಯನ್ನು ಪ್ರಿಯಕರ ಅಫ್ತಾಬ್ ಅಮೀನ್ ಪೂನಾವಾಲ ಎಂಬಾತ ಕಡಿದು ಹತ್ಯೆ ಮಾಡಿದ್ದಲ್ಲದೆ, ದೇಹವನ್ನು 33 ತುಂಡುಗಳನ್ನಾಗಿಸಿ ವಿವಿಧ ಕಡೆಗಳಿಗೆ ಒಯ್ದು ಸುಟ್ಟು ಹಾಕಿದ್ದ. ಈ ಕೃತ್ಯ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಇದೀಗ ಅಂತಹದ್ದೇ ಮತ್ತೊಂದು ಅಮಾನುಷ ಕೃತ್ಯ ವಿಶಾಖಪಟ್ಟಣದಲ್ಲಿ ಬಯಲಿಗೆ ಬಂದಿದೆ.
ನೌಕಾಪಡೆಯಲ್ಲಿ ಅಧಿಕಾರಿಯಾದ ಆತನಿಗೆ ಮದುವೆಯಾಗಿ ಮಡದಿಯೂ ಇದ್ದಳು. ಆದರೂ ಆಕೆ ಸಾಕಾಗಲ್ಲವೆಂದು ಡೇಟಿಂಗ್ ಆ್ಯಪ್ ನಲ್ಲಿ ಪರಿಚಿತಳಾದ ಯುವತಿಯೊಂದಿಗೆ ನಂಟು ಬೆಳೆಸಿಕೊಂಡಿದ್ದ. ಪತ್ನಿ ತವರು ಮನೆಗೆ ಹೋದಾಗೆಲ್ಲ ಆಕೆಯನ್ನು ಮನೆಗೆ ಕರೆದು ರೊಮ್ಯಾನ್ಸ್ ಮಾಡುತ್ತಿದ್ದ. ಪ್ರೀತಿಯ ನೆಪದಲ್ಲಿ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.
ಆದರೆ ಆ ಯುವತಿಯೋ ಅಧಿಕಾರಿಯನ್ನೇ ಹಣಕ್ಕಾಗಿ ದಾಳ ಮಾಡಿಕೊಂಡಿದ್ದಳು. ಇತ್ತೀಚೆಗೆ ನೌಕಾಪಡೆ ಅಧಿಕಾರಿ ಚಿಂತಾಡ ರವೀಂದ್ರನ ಪತ್ನಿ ತವರು ಮನೆಗೆ ಹೋಗಿದ್ದಳು. ಆ ದಿನ ಸಂಜೆ ವೇಳೆಗೆ ಎಂದಿನಂತೆ ತನ್ನ ಪ್ರೇಯಸಿ ಪೊಲಿಪಲ್ಲಿ ಮೌನಿಕಾಳನ್ನು ಮನೆಗೆ ಕರೆಸಿಕೊಂಡಿದ್ದ. ಅದೇನಾಯ್ತೋ ಗೊತ್ತಿಲ್ಲ ಇಬ್ಬರ ನಡುವೆ ಹಣದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಆಕೆಯನ್ನೇ ರವೀಂದ್ರ ಬರ್ಬರವಾಗಿ ಕೊಂದು ಹಾಕಿದ್ದ. ಅಷ್ಟಲ್ಲದೆ, ಆಕೆಯ ದೇಹವವನ್ನು ತುಂಡು ತುಂಡಾಗಿಸಿ ಸೂಟ್ ಕೇಸ್ ನಲ್ಲಿ ಹಾಕಿ ದೂರಕ್ಕೆ ಒಯ್ದು ಎಸೆದು ಬಂದಿದ್ದ.
ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ. 30 ವರ್ಷದ ನೌಕಾಪಡೆ ಅಧಿಕಾರಿ ರವೀಂದ್ರನಿಗೆ 2024ರಲ್ಲಿ ಯುವತಿಯೊಬ್ಬಳೊಂದಿಗೆ ಮದುವೆಯಾಗಿತ್ತು. ಆದರೆ ಆತನಿಗೆ 2021ರಿಂದಲೂ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಯುವತಿ ಪೊಲ್ಲಿಪಲ್ಲಿ ಮೌನಿಕಾಳೊಂದಿಗೆ ಸಂಬಂಧ ಮುಂದುವರಿದಿತ್ತು. ಇಬ್ಬರು ಕೂಡ ಪಾರ್ಕ್, ಥಿಯೇಟರ್ ಎಂದು ಸುತ್ತಾಡುತ್ತಿದ್ದರು. ಜೊತೆಗೆ ದೈಹಿಕ ಸಂಪರ್ಕವೂ ನಡೆಯುತ್ತಿತ್ತು. ಮನೆಗೆ ಪತ್ನಿ ಬಂದಿದ್ದರೂ, ಇವರ ಕದ್ದು ಮುಚ್ಚಿದ ಸಂಬಂಧ ಮುಂದುವರಿದಿತ್ತು.
ರವಿವಾರ ರವೀಂದ್ರನ ಪತ್ನಿ ತವರು ಮನೆಗೆ ಹೋಗಿದ್ದಳು. ಈ ವೇಳೆ ಮೌನಿಕಾಳನ್ನು ರವೀಂದ್ರ ಮನೆಗೆ ಕರೆದಿದ್ದ. ರೊಮ್ಯಾನ್ಸ್ ಮುಗಿದ ಬಳಿಕ ಆಕೆಗೆ ಹಿಂದೆ ಕೊಟ್ಟಿದ್ದ 3.5 ಲಕ್ಷ ರೂ. ಹಣವನ್ನು ಮರಳಿ ಕೇಳಿದ್ದ. ಆದರೆ ಹಣವನ್ನು ಕೊಡುವುದಿಲ್ಲ, ನೀನು ಹಣಕ್ಕಾಗಿ ಪೀಡಿಸಿದರೆ ನಮ್ಮ ಸಂಬಂಧದ ಬಗ್ಗೆ ನಿನ್ನ ಪತ್ನಿಗೆ ಹೇಳುತ್ತೇನೆ ಎಂದು ಬ್ಲಾಕ್ಮೇಲ್ ಮಾಡಿದ್ದಾಳೆ. ಇಂತಹದ್ದೇ ಬ್ಲಾಕ್ಮೇಲನ್ನು ಹಿಂದೆಯೂ ಮಾಡಿದ್ದಳು. ಇದರಿಂದ ಕೋಪಗೊಂಡ ರವೀಂದ್ರ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಹಾಕಿದ್ದಾನೆ.
ರವೀಂದ್ರ ಬೇರೆ ಯುವತಿಯನ್ನು ಮದುವೆಯಾದ ಬಳಿಕ ಇದೇ ರೀತಿಯಲ್ಲಿ ಬೆದರಿಸುತ್ತ ಹಣ ಕೀಳುವ ಕೃತ್ಯ ಮಾಡುತ್ತಿದ್ದಳು. ಪೊಲೀಸ್ ತನಿಖೆಯಲ್ಲಿ ರವೀಂದ್ರ, ಆಕೆಯನ್ನು ಕೊಲ್ಲಲು ಮೊದಲೇ ಪ್ಲಾನ್ ಮಾಡಿದ್ದ ಎನ್ನುವುದು ತಿಳಿದುಬಂದಿದೆ. ಯುವತಿಯನ್ನು ಉಸಿರುಕಟ್ಟಿಸಿ ಕೊಂದ ಬಳಿಕ ಆನೈನಲ್ಲಿ ಚೂರಿಯನ್ನು ತರಿಸಿಕೊಂಡಿದ್ದು ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ತಲೆಯನ್ನು ಕುತ್ತಿಗೆಯಿಂದ ಬೇರ್ಪಡಿಸಿ, ಕಾಲು, ಕೈಗಳನ್ನು ಕತ್ತರಿಸಿ ಟ್ರಾಲಿ ಬ್ಯಾಗ್ ನಲ್ಲಿ ತುಂಬಿಸಿ ಬೇರೆ ಬೇರೆ ಕಡೆ ಎಸೆದಿದ್ದಾನೆ. ದೇಹದ ಒಂದು ಭಾಗವನ್ನು ಫ್ರಿಜ್ ನಲ್ಲಿ ತುಂಬಿಸಿಟ್ಟಿದ್ದಾನೆ.
ತಲೆ ಮತ್ತು ಕೈ ಕಾಲುಗಳನ್ನು ದೂರಕ್ಕೆ ಕೊಂಡೊಯ್ದು ಅಲ್ಲಿ ಅದನ್ನು ಬೆಂಕಿ ಕೊಟ್ಟು ಸುಟ್ಟಿದ್ದ. ಇದರ ನಂತರ ಪಶ್ಚಾತ್ತಾಪಗೊಂಡು, ರವೀಂದ್ರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕೃತ್ಯದ ಬಗ್ಗೆ ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆತನ ಮನೆಗೆ ಬಂದು ತನಿಖೆ ನಡೆಸಿದಾಗ ರುಂಡ ರಹಿತ ದೇಹದ ಭಾಗ ಪ್ರಿಡ್ಜ್ ನಲ್ಲಿರುವುದು ಪತ್ತೆಯಾಗಿದೆ. ಉಳಿದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.