ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿ ಸಾಧಕರನ್ನು ಗೌರವಿಸುವ ಸಮಾರಂಭವು ಸೋಮವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿಯ ಸೇನಾ, ನೌಕಾ ಹಾಗೂ ವಾಯುಪಡೆ ಘಟಕಗಳು ಜಂಟಿಯಾಗಿ ಕರ‍್ಯಕ್ರಮ ಆಯೋಜಿಸಿದ್ದವು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ವಲಯದ ಸೇನಾ ನೇಮಕಾತಿ ಎಡಿಜಿ ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್, ಎನ್‌ಸಿಸಿ ಯುವಜನತೆಯನ್ನು ಶಿಸ್ತು, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮದೊಂದಿಗೆ ರೂಪಿಸುವ ಮಹತ್ವದ ಸಂಘಟನೆಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಂಡಭಾವನೆ ಮತ್ತು ಜವಾಬ್ದಾರಿಯುತ ನಾಗರಿಕತ್ವವನ್ನು ಬೆಳೆಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತಮ್ಮದೇ ಎನ್‌ಸಿಸಿ ಅನುಭವಗಳನ್ನು ನೆನಪಿಸಿಕೊಂಡ ಅವರು, ತರಬೇತಿ ಜೀವನದ ಸವಾಲುಗಳನ್ನು ಎದುರಿಸಲು ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ಹೊಂದಿರಬೇಕು ಎಂದು ಹೇಳಿದರು. ವ್ಯಕ್ತಿಯ ಯಶಸ್ಸು, ಸಮಾಜದ ಶಾಂತಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶಿಸ್ತು ಅಗತ್ಯವಾದ ಅಡಿಪಾಯವಾಗಿದೆ. ಆದ್ದರಿಂದ ಶಿಸ್ತು ಪ್ರತಿಯೊಬ್ಬ ನಾಗರಿಕನ ಜೀವನಶೈಲಿಯಾಗಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವುದನ್ನು ಶ್ಲಾಘಿಸಿದರು. ಜೊತೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ ಯಶಸ್ವಿಯಾಗಿ ನಡೆಯಲು ಆಳ್ವಾಸ್ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.
ಮೂರು ಬಾರಿ ವಿರಾಸತ್ ವೀಕ್ಷಿಸಿದ್ದ ಕ್ಯಾ ಪ್ರಾಂಜಲ್
ರಜೌರಿ ಎನ್‌ಕೌಂಟರ್‌ನಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ತಂದೆ ವೆಂಕಟೇಶ್ ಎಂ. ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮಗನ ವೀರ ಮರಣದ ನಂತರ ಆಳ್ವಾಸ್‌ನಲ್ಲಿ ನಡೆದ, ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ‘ವಿರಾಸತ್’ನ್ನು ಕ್ಯಾಪ್ಟನ್ ಪ್ರಾಂಜಲ್‌ರವರಿಗೆ ಸಮರ್ಪಿಸಿದ್ದನ್ನು ಸ್ಮರಿಸಿದರು. ಪ್ರಾಂಜಲ್ ವಿರಾಸತ್ ಕಾರ್ಯಕ್ರಮವನ್ನು ಮೂರು ಬಾರಿ ಆಸಕ್ತಿಯಿಂದ ವೀಕ್ಷಿಸಿದ್ದನ್ನು ಅವರು ನೆನಪಿಸಿಕೊಂಡರು.
ವಿದ್ಯಾರ್ಥಿಗಳು ಸದಾ ದೊಡ್ಡ ಕನಸನ್ನೇ ಕಾಣಬೇಕು. ರೈತ, ವಿಜ್ಞಾನಿ, ಸೈನಿಕ, ಉದ್ಯಮಿ ಅಥವಾ ಯಾವುದೇ ಕ್ಷೇತ್ರದಲ್ಲಾದರೂ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು. ಸದಾ ಧರ್ಮದ ಮಾರ್ಗದಲ್ಲಿ ನಡೆದು, ತಮ್ಮ ಅಂತರಾತ್ಮದ ಧ್ವನಿಯನ್ನು ಅನುಸರಿಸಿ ಗುರಿ ಸಾಧಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಭಾರತದಲ್ಲಿ ಅಪಾರ ಯುವಶಕ್ತಿ ಇದ್ದು, ಯುವಜನತೆ ರಾಷ್ಟ್ರದ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಆಳ್ವಾಸ್‌ನ ವಿದ್ಯಾರ್ಥಿಗಳು ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಆರ್‌ಡಿಸಿ ಮತ್ತು ಟಿಎಸ್‌ಸಿ ಸಾಧಕರಿಗೆ ಗೌರವ
ಕಾರ್ಯಕ್ರಮದ ಭಾಗವಾಗಿ ನವದೆಹಲಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದ ಆರು ಕ್ಯಾಡೆಟ್‌ಗಳು ಹಾಗೂ ಥಲ್ ಸೈನಿಕ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಒರ್ವ ಕ್ಯಾಡೆಟ್‌ನ್ನು ಸನ್ಮಾನಿಸಲಾಯಿತು. ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್ ದಂಪತಿ ಹಾಗೂ ವೆಂಕಟೇಶ್ ಎಂ.ರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಗಣ್ಯರು ಉಪಸ್ಥಿತಿ
ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ರೋಹಿತ್ ರಾಯ್, ಕಮಾಂಡರ್ ಲಿಬಿನ್ ಜಾನ್ಸನ್, ವಿಂಗ್ ಕಮಾಂಡರ್ ಪ್ರವೀಣ್ ಕರಿಯಪ್ಪ, ಕರ್ನಲ್ ಜಿ. ಸೋಮು ಮಹಾರಾಜನ್, ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್ ಪತ್ನಿ ಮರ್ಲಿನ್ ಫರ್ನಾಂಡಿಸ್, ಫೆಡರಲ್ ಬ್ಯಾಂಕ್‌ನ ಸಂಜೋ ಜೋಸೆಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕರ‍್ಯಕ್ರಮದಲ್ಲಿ ಎಎನ್‌ಒಗಳಾದ ಕಿರಣ್, ಧನಂಜಯ ಆಚರ‍್ಯ, ಪ್ರಸಾದ್ ಇದ್ದರು. ಕರ‍್ಯಕ್ರಮವನ್ನು ಪವಿತ್ರ ನಿರೂಪಿಸಿದರು.