ಕೇರಳ: ಅಯೋಧ್ಯೆ ರಾಮಮಂದಿರ ಮಾತ್ರವಲ್ಲದೆ ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟುಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.
ಕೇರಳದ ಕೋಝಿಕ್ಕೋಡ್‌ನಲ್ಲಿ ಮಾತನಾಡಿದ ಕೆ.ಕೆ.ಮುಹಮ್ಮದ್ ಅವರು, 'ನನ್ನ ಪ್ರಕಾರ ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಲೇಬೇಕು. ಶ್ರೀಕೃಷ್ಣನ ಜನ್ಮಸ್ಥಳ ಮಥುರಾ ಹಾಗೂ ಕಾಶಿಯ ಶಿವನ ದೇವಸ್ಥಾನಕ್ಕೆ ಸಂಬಂಧ ಹೊಂದಿರುವ ಜ್ಞಾನವಾಪಿಯಲ್ಲಿರುವ ಮಸೀದಿಗಳನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂದು ಅವರು ಹೇಳಿದ್ದಾರೆ.
ಮೆಕ್ಕಾ ಮತ್ತು ಮದೀನಾ ಮುಸ್ಲಿಮರಿಗೆ ಎಷ್ಟು ಮುಖ್ಯವೋ ಈ ಎರಡು ಪ್ರಮುಖ ಸ್ಥಳಗಳು ಹಿಂದೂಗಳಿಗೂ ಅಷ್ಟೇ ಮುಖ್ಯವಾಗುತ್ತದೆ. ಆದರೆ ಎಲ್ಲಾ ಮಸೀದಿಗಳ ಹಿಂದೆ ಹಿಂದುಗಳೂ ಹೋಗುವುದನ್ನು ಬಿಟ್ಟು ಬಿಡಬೇಕು ಎಂದು ಮುಹಮ್ಮದ್ ಹೇಳಿದ್ದಾರೆ.
ಇದೇ ವೇಳೆ ಮುಸ್ಲಿಮರಿಗಾಗಿ ಪ್ರತ್ಯೇಕ ದೇಶ ಪಾಕಿಸ್ತಾನವನ್ನು ನೀಡಿದ ಬಳಿಕವೂ, ಭಾರತ ಇಂದು ಜಾತ್ಯತೀತ ದೇಶವಾಗಿದ್ದರೆ, ಅದು ಹಿಂದೂಗಳ ಉದಾರತೆ ಕಾರಣದಿಂದ ಎಂಬುದನ್ನು ಮುಸ್ಲಿಮರು ಒಪ್ಪಲೇಬೇಕು. ಭಾರತ ಮುಸ್ಲಿಂ ಬಾಹುಳ್ಯ ದೇಶವಾಗಿದ್ದರೆ, ಅದು ಎಂದಿಗೂ ಜಾತ್ಯತೀತ ದೇಶವಾಗುತ್ತಿರಲಿಲ್ಲ. ಈ ಸೂಕ್ಷ್ಮ ಸಂಗತಿಯನ್ನು ಮುಸ್ಲಿಮರು ಅರಿತುಕೊಳ್ಳಬೇಕು. ಇದಕ್ಕಾಗಿ ಅವರ ಕಡೆಯಿಂದ ಕೆಲವು ಸನ್ನೆಗಳು ಬರಬೇಕಾಗಿದೆ ಎಂದು ಹೇಳಿದರು.
ಅಲ್ಲದೆ, ನೀವು ಕಮ್ಯುನಿಸ್ಟ್ ಇತಿಹಾಸಕಾರರೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡಬಾರದು. ಏಕೆಂದರೆ ಅವರು ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತಾರೆ. ಮುಸ್ಲಿಮರಲ್ಲೂ ಒಂದು ವಿಭಾಗವು ರಾಮ ಜನ್ಮಭೂಮಿಯನ್ನು ಹಸ್ತಾಂತರಿಸಲು ಸಿದ್ದವಾಗಿತ್ತು. ಈ ಬಗ್ಗೆ ಅನೇಕರೊಂದಿಗೆ ಮಾತನಾಡಿದ್ದೇನೆ. ಆದರೆ ಕಮ್ಯುನಿಸ್ಟ್ ಇತಿಹಾಸಕಾರರು ಮುಸ್ಲಿಮರ ಮನಸ್ಸನ್ನು ವಿಷಪೂರಿತಗೊಳಿಸುತ್ತಾರೆ ಎಂದಿದ್ದಾರೆ.