ಗೋವಾ ಅರ್‌ಪೋರಾ ನೈಟ್‌ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ : 23ಮಂದಿ ಸಜೀವ ದಹನ


ಗೋವಾ: ಉತ್ತರ ಗೋವಾದ ಜನಪ್ರಿಯ ಅರ್‌ಪೋರಾ ನೈಟ್‌ಕ್ಲಬ್‌ನಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 23 ಮಂದಿ ದುರ್ಮರಣ ಹೊಂದಿದ್ದಾರೆ. ಅಡುಗೆಮನೆಯಲ್ಲಿ ಗ್ಯಾಸ್‌ ಸಿಲಿಂಡ‌ರ್ ಸ್ಫೋಟವೇ ಈ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದೇ ಹೆಚ್ಚಿನ ಸಾವು-ನೋವಿಗೆ ಕಾರಣ ಎನ್ನಲಾಗಿದ್ದು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ತಕ್ಷಣವೇ ತನಿಖೆಗೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಅವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಮೃತರ ಪೈಕಿ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರೂ ಇರುವುದು ದೃಢಪಟ್ಟಿದೆ. ಗೋವಾ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್‌ಪೋರಾ ಗ್ರಾಮದಲ್ಲಿರುವ ಈ ನೈಟ್‌ಕ್ಲಬ್ ಕಳೆದ ವರ್ಷವಷ್ಟೇ ಆರಂಭವಾಗಿತ್ತು. ಘಟನಾ ಸ್ಥಳದಿಂದ ಎಲ್ಲ 23 ಶವಗಳನ್ನು ಹೊರತೆಗೆದು, ಬಾಂಬೋಲಿಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಇಡೀ ರಾತ್ರಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿದ್ದಾರೆ.

ಅಗ್ನಿ ದುರಂತದ ಕುರಿತು ತೀವ್ರ ನೋವು ವ್ಯಕ್ತಪಡಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಮತ್ತು ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಭೀಕರ ನೈಟ್‌ಕ್ಲಬ್ ಅಗ್ನಿ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿ, ಶೀಘ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.