ChatGPT ಸಹಾಯದಿಂದ ಬರೋಬ್ಬರಿ 10ಲಕ್ಷ ರೂ. ಸಾಲ ತೀರಿಸಿದ ಮಹಿಳೆ- ಹೇಗೆ ಗೊತ್ತೇ?
ಸಾಲ ಅನ್ನೋದು ಒಂದು ರೀತಿ ಸುಳಿಯಲ್ಲಿ ಸಿಕ್ಕಿಕೊಂಡಂತೆ. ಒಮ್ಮೆ ಸಿಕ್ಕಿಕೊಂಡರೆ ಅದರಿಂದ ಹೊರಬರೋದು ಕಷ್ಟ. ಅಮೆರಿಕಾದ ಜೆನ್ನಿಫರ್ ಅಲೆನ್ ಎಂಬ 36 ವರ್ಷದ ಮಹಿಳೆಯ ಕಥೆಯೂ ಇದೇ ರೀತಿಯಾಗಿತ್ತು. ಈಕೆಗೆ ಬರೋಬ್ಬರಿ 23,000 ಡಾಲರ್, ಅಂದರೆ ಭಾರತೀಯ ಲೆಕ್ಕಾಚಾರದ ಪ್ರಕಾರ ಸುಮಾರು 19.69 ಲಕ್ಷ ರೂ. ಕ್ರೆಡಿಟ್ ಕಾರ್ಡ್ ಸಾಲ ಮಾಡಿಕೊಂಡಿದ್ದರು. ಆದರೆ, ಇದೀಗ ಅವರು ಆ ಸಾಲದಿಂದ ಬಹುತೇಕ ಮುಕ್ತರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮನುಷ್ಯರಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ, ಅಂದರೆ ChatGPT!
ಹೌದು, ನೀವು ನೀವು ಓದುತ್ತಿರುವ ಸಂಗತಿ ಅಕ್ಷರಶಃ ಸತ್ಯ. ChatGPT ಕೊಟ್ಟ ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸಿದ ಜೆನ್ನಿಫರ್ ತಮ್ಮ ಬದುಕನ್ನೇ ಬದಲಿಸಿಕೊಂಡಿದ್ದಾರೆ. ಏನಿದು ಕಥೆ? ಬನ್ನಿ ನೋಡೋಣ.
ಜೆನ್ನಿಫರ್ ಓರ್ವ ರಿಯಾಲ್ಟರ್ (ರಿಯಲ್ ಎಸ್ಟೇಟ್ ಏಜೆಂಟ್) ಮತ್ತು ಕಂಟೆಂಟ್ ಕ್ರಿಯೇಟರ್. ಚೆನ್ನಾಗಿಯೇ ದುಡಿಯುತ್ತಿದ್ದರು. ಆದರೆ, ಬಂದ ದುಡ್ಡನ್ನು ಯಾವ ರೀತಿ ನಿರ್ವಹಿಸಬೇಕು ಅನ್ನೋದೇ ಅವರಿಗೆ ಗೊತ್ತಿರಲಿಲ್ಲ. "ನನ್ನಲ್ಲಿ ಹಣ ಇರಲಿಲ್ಲ ಎಂದಲ್ಲ, ಆದರೆ ಸಣ್ಣ ವಯಸ್ಸಿನಿಂದಲೇ ಹಣಕಾಸಿನ ಬಗ್ಗೆ ಯಾರೂ ಹೇಳಿಕೊಟ್ಟಿರಲಿಲ್ಲ. ಹಾಗಾಗಿ, ಬಜೆಟ್ ಮಾಡುವುದರಿಂದ ಯಾವಾಗಲೂ ದೂರ ಓಡುತ್ತಿದ್ದೆ. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ, ಕೊನೆಗೆ ಸಾಲದಲ್ಲೇ ಮುಳುಗುತ್ತಿದ್ದೆ" ಎಂದು ಜೆನ್ನಿಫರ್ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ.
ಅದರಲ್ಲೂ ಪುತ್ರಿ ಹುಟ್ಟಿದ ಮೇಲಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಖರ್ಚುಗಳು ಹೆಚ್ಚಾದಾಗ, ಅದನ್ನು ನಿಭಾಯಿಸಲು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಅವಲಂಬಿತರಾಗಲು ಶುರುಮಾಡಿದೆ. "ನಾವು ಯಾವ ಐಷಾರಾಮಿ ಜೀವನ ನಡೆಸುತ್ತಿರಲಿಲ್ಲ. ಕೇವಲ ದೈನಂದಿನ ಅಗತ್ಯಗಳಿಗಾಗಿಯೇ ಕಾರ್ಡ್ ಬಳಸುತ್ತಿದ್ದೆವು. ಆದರೆ, ಸಾಲದ ಹೊರೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು" ಎನ್ನುತ್ತಾರೆ ಅವರು.
ಒಂದು ದಿನ, ಸಾಲದ ಚಿಂತೆಯಲ್ಲಿ ಮುಳುಗಿದ್ದ ಜೆನ್ನಿಫರ್‌ಗೆ 'ಚಾಟ್‌ಜಿಪಿಟಿ'ಯ ಸಹಾಯ ಪಡೆದರೆ ಹೇಗೆ ಎಂಬ ಒಂದು ಐಡಿಯಾ ಬಂತು. 30 ದಿನಗಳ ಒಂದು ಚಾಲೆಂಜ್ ಹಾಕಿಕೊಂಡರು. ಪ್ರತಿದಿನ ChatGPT ಬಳಿ, "ನನ್ನ ಸಾಲ ತೀರಿಸಲು, ಹಣ ಉಳಿಸಲು ಅಥವಾ ಗಳಿಸಲು ನಾನೇನು ಮಾಡಬೇಕು?" ಎಂದು ಕೇಳಲು ನಿರ್ಧರಿಸಿದರು.
30 ದಿನಗಳ ಚಾಲೆಂಜ್ ಮುಗಿಯುವ ಹೊತ್ತಿಗೆ, ಜೆನ್ನಿಫರ್ ಸುಮಾರು 12,078 ಡಾಲರ್ (ಸುಮಾರು 10.3 ಲಕ್ಷ ರೂ.) ಸಾಲವನ್ನು ತೀರಿಸಿದ್ದರು. ಅಂದರೆ, ತಮ್ಮ ಒಟ್ಟು ಸಾಲದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಒಂದೇ ತಿಂಗಳಲ್ಲಿ ಕಡಿಮೆ ಮಾಡಿಕೊಂಡಿದ್ದರು!
ಜೆನ್ನಿಫರ್ ಈಗ ಉಳಿದ ಸಾಲವನ್ನು ತೀರಿಸಲು ಮತ್ತೊಂದು 30ದಿನಗಳ ಚಾಲೆಂಜ್‌ಗೆ ಸಿದ್ಧವಾಗಿದ್ದಾರೆ. "ಜೀವನದಲ್ಲಿ ಮೊದಲ ಬಾರಿಗೆ, ನನ್ನ ಸಾಲದ ಬಗ್ಗೆ ನನಗೆ ನಾಚಿಕೆ ಇಲ್ಲ. ಬದಲಿಗೆ, ಸಾಧನೆ ಮಾಡಿದ ಹೆಮ್ಮೆಯಿದೆ, ಧೈರ್ಯವಿದೆ" ಎಂದು ಜೆನ್ನಿಫರ್ ಹೇಳಿದ್ದಾರೆ.