ಲಕ್ನೋ: ಇಲ್ಲಿನ ಪಶ್ಚಿಮ ಉತ್ತರಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ ಎ.10ರಂದು ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಸಹಿತ 8 ಮಂದಿಯನ್ನು ಬಂಧಿಸಲಾಗಿದೆ.
ಅಖಿಲೇಶ್ ಪ್ರತಾಪ್ ಸಿಂಗ್ ಕಸ್ಗಂಜ್‌ನ ಶಾಸಕರಾದ ದೇವೇಂದ್ರ ರಜಪೂತ್ ಹಾಗೂ ಹರಿಓಂ ವರ್ಮಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ. ಈತ ಕಳೆದ 15 ವರ್ಷಗಳಿಂದ ಉತ್ತರಪ್ರದೇಶದ ಆಡಳಿತಾರೂಢ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾನೆ. ಅಲ್ಲದೆ ಬಿಜೆಪಿ ಶಾಸಕ ಹಾಗೂ ಕಸ್ಲಂಜ್‌ನ ಮಾಜಿ ಸಂಸದ ರಾಜ್ ವೀರ್ ಸಿಂಗ್ ಆಲಿಯಾಸ್ ರಜ್ಜು ಭಯ್ಯಾ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಗಬ್ಬರ್ ಎಂದು ಕುಖ್ಯಾತಿ ಗಳಿಸಿದ್ದ ಆರೋಪಿ ಅಖಿಲೇಶ್ ಪ್ರತಾಪ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆಯ ಪ್ರಕರಣ ಕೂಡ ದಾಖಲಾಗಿದೆ. ಬುಲಂದ್‌ಶಹರ್‌ನ ಮಾಜಿ ಶಾಸಕಿ ಅನಿತಾ ಲೋಧಿ ಅವರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಕೂಡ ಈತನ ಹೆಸರು ಕೇಳಿ ಬಂದಿತ್ತು. ಪ್ರಸಕ್ತ ಈತ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ.
17 ವರ್ಷದ ಬಾಲಕಿಯನ್ನು ಆಕೆಯ ಗ್ರಾಮದಲ್ಲಿರುವ ಕಾಲುವೆಯ ಸಮೀಪ ಎಪ್ರಿಲ್ 10ರಂದು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. "ತನ್ನ ಭಾವಿ ಪತಿಯೊಂದಿಗೆ ಪಡಿತರ ಚೀಟಿಯ ಕೆಲಸ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಕಾಲುವೆಯ ಸಮೀಪದ ಮರವೊಂದರ ಕೆಳಗೆ ಆಹಾರ ಸೇವಿಸಲು ತಂಗಿದ್ದೆವು. ಈ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ"ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಕಸ್ಲಂಜ್ ಪೊಲೀಸ್ ಅಧೀಕ್ಷಕ ಅಂಕಿತ್ ಶರ್ಮಾ ತಿಳಿಸಿದ್ದಾರೆ.