ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಲು ನಂಬಿಸಿ 1.25 ಕೋಟಿ ವಂಚನೆ



ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದೆಂದು ವಾಟ್ಸ್ಆ್ಯಪ್‌ ಚಾಟಿಂಗ್‌ನಲ್ಲಿ ಅಪರಿಚಿತರು ಹೇಳಿರುವುದನ್ನು ನಂಬಿ 1,25,67, 726 ರೂ. ಕಳೆದುಕೊಂಡಿರುವ ವ್ಯಕ್ತಿಯೊಬ್ಬರು ಕುರಿತಂತೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರ ವಾಟ್ಸ್ಆ್ಯಪ್‌ಗೆ ಆನ್‌ಲೈನ್ ಟ್ರೇಡಿಂಗ್ ಕುರಿತಂತೆ ಮೆಸೇಜ್ ಬಂದಿದೆ. ಸಂದೇಶ ಕಳುಹಿಸಿರುವ ವ್ಯಕ್ತಿ ಚಾಟಿಂಗ್‌ನಲ್ಲಿ ತಿಳಿಸಿದಂತೆ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ. ಅನಂತರ "ವಿಐಪಿ ಎಚ್2 ಶೇರ್‌ಖಾನ್ ಕ್ಯಾಪಿಟಲ್" ಎಂಬ ವಾಟ್ಸ್ಆ್ಯಪ್ ಗ್ರೂಪ್‌ಗೆ ದೂರುದಾರರನ್ನು ಸೇರಿಸಲಾಗಿದೆ.

ಬಳಿಕ ಲಿಂಕ್ ಒಂದನ್ನು ಕಳುಹಿಸಿದ್ದು, ಅದನ್ನು ಒತ್ತುವ ಮೂಲಕ ಶೇರ್‌ಖಾನ್ ಇಂಟರ್‌ನ್ಯಾಷನಲ್ ಸೆಕ್ಯೂರಿಟಿ ಫ್ಲಾಟ್‌ ಫಾರಂಗೆ ಸೇರಿಸಿದ್ದಾರೆ. ಮೊದಲಿಗೆ 2024ರ ಸೆ.1ರಂದು 1 ಲಕ್ಷ ರೂ. ಅನ್ನು ಅವರು ತಿಳಿಸಿದಂತೆ ಅವರ ಖಾತೆಗೆ ಯುಪಿಐ ಮಾಡಿದ್ದಾರೆ. 

ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂದು ತಿಳಿಸಿದಂತೆ ಸೆ.1ರಿಂದ 15ರ ನಡುವೆ ಒಟ್ಟು 25 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ಅಕೌಂಟ್ ನಂಬರ್ ತಪ್ಪಾಗಿದೆ, ಪ್ರೊಟೆಕ್ಷನ್ ಮೆಕ್ಯಾನಿಸಮ್ ಆ್ಯಕ್ಟಿವೇಟ್ ಆಗಿದೆ ಪುನಃ 35 ಲಕ್ಷ ರೂ. ವರ್ಗಾವಣೆ ಮಾಡಬೇಕು ಎಂದು ಸೂಚನೆ ಬಂದಿದೆ. ಅದರಂತೆ ತಲಾ 35 ಲಕ್ಷ ರೂ. ಅನ್ನು ಎರಡು ಬಾರಿ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.

ಆ ಬಳಿಕವೂ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ತಿಳಿದು ಬಂದಿದೆ. 

ಹೀಗೆ ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭದ ಆಮಿಷ ತೋರಿಸಿ ಒಟ್ಟು 1,25,67, 726 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.