ಮದುವೆಯಾಗುವಂತೆ ಪೀಡನೆ ಪ್ರೀತಿಸಿದಾಕೆಯನ್ನೇ ಕೊಲೆಗೈದು ಹೂತಿಟ್ಟ ಪ್ರಿಯಕರ - ಪೊಲೀಸ್ ತನಿಖೆಯಲ್ಲಿ ಸಿಕ್ಕಿತು ಮರ್ಡರ್ ರಹಸ್ಯ
Wednesday, July 24, 2024
ಶಿವಮೊಗ್ಗ: ವಿವಾಹವಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿಯನ್ನು ಪ್ರಿಯಕರನೇ ಹಲ್ಲೆಗೈದು ಕೊಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಕೊಲೆಯಾದ ಯುವತಿ. ಸಾಗರ ಮೂಲದ ಯುವಕ ಸೃಜನ್ ಕೊಲೆ ಆರೋಪಿ.
ತೀರ್ಥಹಳ್ಳಿಯ ಫೈನಾನ್ಸ್ ಕಂಪೆನಿಯೊಂದರಲ್ಲಿ ಸೃಜನ್ ಕೆಲಸ ಮಾಡುತ್ತಿದ್ದ. ಈತ ಕೊಪ್ಪದ ಆಸುಪಾಸಿನಲ್ಲಿ ಹಣ ವಸೂಲಿಗೆ ಹೋಗುತ್ತಿದ್ದ. ಇದೇ ವೇಳೆ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸೌಮ್ಯಾಳ ಪರಿಚಯವಾಗಿದೆ. ಇಬ್ಬರ ನಡುವಿನ ಈ ಪರಿಚಯ ಪ್ರೀತಿಗೆ ತಿರುಗಿದೆ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಸೌಮ್ಯಾ ಮದುವೆಯಾಗುವಂತೆ ಸೃಜನ್‌ನನ್ನು ಒತ್ತಾಯಿಸುತ್ತಿದ್ದಳು. ಜಾತಿ ಬೇರೆಯಾಗಿದ್ದರಿಂದ ಯುವಕನ ಮನೆಯವರು ಈ ಮದುವೆಯನ್ನು ನಿರಾಕರಿಸಿದ್ದಾರೆ. ಆದರೆ ಸೌಮ್ಯಾ ಮಾತ್ರ ಸೃಜನ್‌ನನ್ನು ಮದುವೆಯಾಗುವಂತೆ ಪೀಡಿಸಲಾರಂಭಿಸಿದ್ದಾಳೆ.
ಆದರೆ ಜುಲೈ 2ರಂದು ತೀರ್ಥಹಳ್ಳಿಗೆ ಹೋಗುತ್ತೇನೆಂದು ಕೊಪ್ಪದಿಂದ ಸೌಮ್ಯಾ ಸಾಗರಕ್ಕೆ ಬಂದಿದ್ದಳು. ಸೃಜನ್‌ನನ್ನು ಸಾಗರ ತಾಲೂಕಿನ ಆನಂದಪುರಂ ಬಳಿ ಭೇಟಿಯಾಗಿ "ತನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು" ಎಂದು ಒತ್ತಾಯಿಸಿದ್ದಳು. "ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು" ಎಂದು ಆತ ಹೇಳಿದ್ದರೂ ಕೇಳದೆ ಮತ್ತೆ ಮತ್ತೆ ಒತ್ತಾಯಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಸಿಟ್ಟಿಗೆದ್ದ ಸೃಜನ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಳು.
ಸೌಮ್ಯಾ ಸತ್ತಿದ್ದರಿಂದ ಭಯಗೊಂಡ ಸೃಜನ್, ಆಕೆಯ ಶವವನ್ನು ಗುಡ್ಡದಲ್ಲಿ ಹೂತಿಟ್ಟು ಮನೆಗೆ ತೆರಳಿದ್ದ. ಇತ್ತ ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಿದ್ದರು. ಯುವಕನನ್ನು ಹುಡುಕಿ ಕೊಪ್ಪ ಪೊಲೀಸರು ಸಾಗರಕ್ಕೆ ಬಂದಿದ್ದರು. ಆರೋಪಿಯನ್ನು ಶಂಕೆಯಿಂದ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಲೇ ಪೊಲೀಸರಲ್ಲಿ ತಾನು ಆಕೆಯನ್ನು ಕೊಲೆಗೈದು ಹೂತಿಟ್ಟ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.