ಹಣಕ್ಕಾಗಿ ಮೂವರು ಯುವಕರನ್ನು ಕೂಡಿಹಾಕಿ ಗುಪ್ತಾಂಗಕ್ಕೆ ಬ್ಯಾಟರಿ ಶಾಕ್‌, ಯದ್ವಾತದ್ವಾ ಥಳಿತ - 7 ಮಂದಿ ಅರೆಸ್ಟ್



ಕಲಬುರಗಿ: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಮಾಡುವ ವ್ಯಕ್ತಿ ಹಾಗೂ ಆತನ ಸ್ನೇಹಿತರನ್ನು ಹಣಕೊಡುವಂತೆ ಕೂಡಿಹಾಕಿ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಬ್ಯಾಟರಿ ಶಾಕ್‌ ನೀಡಿ, ಕೋಲಿನಿಂದ ಯದ್ವಾತದ್ವಾ ಥಳಿಸಿರುವ ಘಟನೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೇಡಂ ತಾಲೂಕಿನ ದೇವನೂರಿನ ಅರ್ಜುನಪ್ಪ ಹಣಮಂತ, ಇಸ್ಲಾಮಾಬಾದ್‌ ಕಾಲನಿಯ ಮಹಮ್ಮದ್‌ ಸಮಿರುದ್ದೀನ್‌ ಹಾಗೂ ಹೀರಾಪುರದ ಅಬ್ದುಲ್‌ ರೆಹಮಾನ್‌ ಹಲ್ಲೆಗೊಳಗಾದ ಸಂತ್ರಸ್ತರು. ಕಲಬುರಗಿ ಗಣೇಶ ನಗರದ ನಿವಾಸಿಗಳಾದ ಇಮ್ರಾನ್‌ ಪಟೇಲ್‌, ಮಹಮ್ಮದ್‌ ಮತೀನ್‌, ಮುಹಾಹೀರ್‌ ನಗರ ನಿವಾಸಿ ಮಹಮ್ಮದ್‌ ಜಿಯಾ ಅಲ್‌ ಹುಸೈನಿ, ಇಸ್ಲಾಮಾಬಾದ್‌ ಕಾಲನಿಯ ಮಹಮ್ಮದ್‌ ಅಫ‌ಜ್ಲ್ ಸೈಕ್‌, ಮಿಲತ್‌ ನಗರದ ಹುಸೈನ್‌ ಸೈಕ್‌, ಚಿತ್ತಾಪುರದ ರಮೇಶ ದೊಡ್ಡಮನಿ ಹಾಗೂ ವಾಡಿಯ ಸಾಗರ ಶ್ರೀಮಂತ ಸೇರಿ ಇತರರ ಕೃತ್ಯ ಎಸಗಿದವರು. ಇವರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ.



ಅರ್ಜುನಪ್ಪ ಹಣಮಂತ ಬೆಂಗಳೂರಿನಿಂದ ಸೆಕೆಂಡ್‌ ಹ್ಯಾಂಡ್‌ ಕಾರ್‌ಗಳನ್ನು ತಂದು ಮಾರುತ್ತಿದ್ದರು. ಇವರಿಗೆ ಪರಿಚಯವಿರುವ ರಮೇಶ ದೊಡ್ಡಮನಿ ಸೆಕೆಂಡ್‌ ಹ್ಯಾಂಡ್‌ ಕಾರು ಕೊಡಿಸುವಂತೆ ಕೇಳಿದಾಗ 6 ಲಕ್ಷ ರೂ. ಸೆಕೆಂಡ್‌ ಹ್ಯಾಂಡ್‌ ಕಾರು ಇದೆ. ಅದಕ್ಕೆ 1 ಲಕ್ಷ ರೂ. ಕಮಿಷನ್‌ ಕೊಡಬೇಕು ಎಂದಿದ್ದರು. ಅದರಂತೆ ಮೇ 4ರಂದು ಚಿತ್ತಾಪುರದಿಂದ ಕಾರಿನಲ್ಲಿ ಅರ್ಜುನಪ್ಪ ಕಾರು ಬೇಕೆಂದು ಹೇಳಿರುವ ರಮೇಶ ಹೇಳಿರುವ ನಾಗನಹಳ್ಳಿ ಕ್ರಾಸ್‌ಗೆ ಬಂದಿದ್ದಾರೆ. ಜೊತೆಗೆ ಅಬ್ದುಲ್‌ ರಹೆಮಾನ್‌ ಹಾಗೂ ಸಮಿರುದ್ದೀನ್‌ನನ್ನು ಕರೆದುಕೊಂಡು ಬಂದಿದ್ದರು.

ಈ ವೇಳೆ ರಮೇಶ ಹಣ ತರೋಣವೆಂದು ಮೂವರನ್ನು ಹಾಗರಗಾ ರಸ್ತೆಯ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿದ್ದ ಇಮ್ರಾನ್‌ ಸೇರಿದಂತೆ ಇಬ್ಬರು ಟೆಸ್ಟ್‌ ಡ್ರೈವ್‌ಗಾಗಿ ಕಾರು ತೆಗೆದುಕೊಂಡು ಹೋಗಿ ವಾಪಸ್‌ ಬಂದಿದ್ದಾರೆ. ಬಳಿಕ ಮೂವರನ್ನು ಕಾರಿನಿಂದ ಎಳೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. 10 ರಿಂದ 12 ಮಂದಿ ಸುತ್ತುವರಿದು ಮೂವರನ್ನೂ ವಿವಸ್ತ್ರಗೊಳಿಸಿದ್ದಾರೆ. ಇಮ್ರಾನ್‌ ಬ್ಯಾಟರಿ ಕರೆಂಟ್‌ನಿಂದ ಮೂವರ ಗುಪ್ತಾಂಗಕ್ಕೆ ಶಾಕ್‌ ನೀಡಿದ್ದಾನೆ. ಮತೀನ್‌ ಹಾಗೂ ಇತರರು ಕೋಲಿನಿಂದ ಮೂವರ ಪೃಷ್ಟಭಾಗಕ್ಕೆ ಯದ್ವಾತದ್ವಾ ಥಳಿಸಿದ್ದಾರೆ. ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾರೆ. ಇಮ್ರಾನ್‌ ಅಬ್ದುಲ್‌ ಎದೆಗೆ ಲಾಂಗ್‌ಗಳಿಂದ ಚುಚ್ಚಿ, ಬೆನ್ನಿನ ಮೇಲೆಯೂ ಗಾಯಗೊಳಿಸಿದ್ದಾನೆ ಎಂದು ಸಂತ್ರಸ್ತರು ದೂರಿನಲ್ಲಿ ಆರೋಪಿಸಿದ್ದಾರೆ.


ಮೇ 5ರಂದು ಅರ್ಜುನಪ್ಪಗೆ ಜೀವ ಬೆದರಿಕೆ ಹಾಕಿದ್ದು, ಆತನ ಪತ್ನಿಗೆ ಕರೆ ಮಾಡಿ, 50 ಸಾವಿರ ರೂ. ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಜೊತೆಗೆ ಅರ್ಜುನಪ್ಪ ಮೊಬೈಲ್‌ ಕಿತ್ತುಕೊಂಡ ಪಾಸ್‌ವರ್ಡ್‌, ಫೋನ್‌ ಪೇ ಮಾಹಿತಿ ಪಡೆದು, 4,200 ರೂ. ಖರ್ಚು ಮಾಡಿದ್ದಾನೆ. ಅಲ್ಲದೇ ಸಂಜೆ 7 ಗಂಟೆಯೊಳಗೆ ಏಳು ಲಕ್ಷ ರೂ. ಕೊಡುವಂತೆ ಹಾಗೂ ತಿಂಗಳಿಗೆ ಒಂದು ಲಕ್ಷ ರೂ. ಕಮೀಷನ್‌ ಕೊಡುವಂತೆ ತಾಕೀತು ಮಾಡಿದ್ದಾರೆ. ಸಂಜೆ ಪೊಲೀಸರು ಸ್ಥಳಕ್ಕೆ ಧಾವಿಸುತ್ತಲೇ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ಏಳುಮಂದಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.