ಮಂಗಳೂರು: ಬ್ರೇಕ್ ಫೇಲ್ ಆದ ಲಾರಿ - ಸರಣಿ‌ ಅಪಘಾತದಲ್ಲಿ ನಾಲ್ಕು ಬೈಕ್, ಸ್ವಿಫ್ಟ್ ಕಾರು ಜಖಂ, ಮೂವರಿಗೆ ಗಾಯ



ಮಂಗಳೂರು: ಸಿಮೆಂಟ್ ಮಿಕ್ಸ್ ಮಾಡುವ ಮಣ್ಣು ಸಾಗಿಸುವ ಕಂಟೇನರ್ ಲಾರಿಯೊಂದು ಬ್ರೇಕ್ ಫೇಲ್ ಆಗಿ‌ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ ಅವಾಂತರ ಸೃಷ್ಟಿಯಾಗಿರುವ ಘಟನೆ ಮಂಗಳೂರು- ಮೂಡುಬಿದಿರೆ ಹೆದ್ದಾರಿಯ ಎಡಪದವು ಜಂಕ್ಷನ್ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಗಂಜಿಮಠದಿಂದ ಎಡಪದವು ಇಳಿಜಾರಿನಲ್ಲಿ ಸಾಗುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದೆ‌. ನಿಯಂತ್ರಣ ತಪ್ಪಿದ ಲಾರಿ ಎಡಪದವು ಜಂಕ್ಷನ್ ನಲ್ಲಿ ಮುಂದಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಬದಿಗೆ ತಗೊಂಡಿದ್ದಾನೆ. ಆಗ ಅಲ್ಲಿ ನಿಂತಿದ್ದ ಟ್ಯಾಂಕ‌ರ್ ಲಾರಿಗೆ ಡಿಕ್ಕಿಯಾಗಿ ಮುಂದಕ್ಕೆ ಬಂದು ಅಗರಿ ಶೋರೂಮ್ ಇರುವ ಅಂಗಡಿ ಕಟ್ಟಡಕ್ಕೆ ನುಗ್ಗಿದೆ. ಫುಲ್ ಲೋಡ್ ಇದ್ದ ಕಾರಣ ಲಾರಿ ಓರೆಯಾಗಿ ನಿಂತಿದೆ.


ಅಲ್ಲಿ ರಸ್ತೆ ಬದಿಯಲ್ಲಿದ್ದ ಟ್ಯಾಂಕರ್ ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ನಾಲ್ಕು ಬೈಕ್, ಸ್ಕೂಟರ್ ಅಪ್ಪಚ್ಚಿಯಾಗಿದೆ. ಅಲ್ಲದೆ, ಅಲ್ಲಿದ್ದ ಸ್ವಿಫ್ಟ್ ಕಾರು ಕೂಡ ನಜ್ಜುಗುಜ್ಜಾಗಿದೆ. ಲಾರಿ ಕಟ್ಟಡದತ್ತ ನುಗ್ಗಿ ಬರುತ್ತಿದ್ದಂತೆ ಸಾರ್ವಜನಿಕರು ಓಡಿದ್ದರಿಂದ ಬಚಾವಾಗಿದ್ದಾರೆ. ಲಾರಿ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ಸಿನ ಮುಂಭಾಗಕ್ಕೆ ಒರಸಿದ್ದು ಹಾನಿಯಾಗಿದ್ದು ಬಿಟ್ಟರೆ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.

ಅಪಘಾತದ ವೇಳೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ರಾತ್ರಿಯವರೆಗೂ ಟ್ರಾಫಿಕ್ ಕ್ಲಿಯರ್ ಆಗಿರಲಿಲ್ಲ. ಬಜ್ಪೆ ಠಾಣೆ ಪೊಲೀಸರು ಲಾರಿಯನ್ನು ತೆರವುಗೊಳಿಸಲು ಹರಸಾಹಸ ಮಾಡಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu