ಪ್ರೀವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತಾ?
Tuesday, March 5, 2024
ಮುಂಬೈ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಮಾರಂಭಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಈ ಸಮಾರಂಭಕ್ಕೆ ಭಾರತೀಯ ಸಿನಿಮಾ ಸೆಲೆಬ್ರಿಟಿಗಳಿಂದ ಹಿಡಿದು, ವಿದೇಶಿ ತಾರೆಯರನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕರೆಸಿಕೊಳ್ಳಲಾಗಿದೆ. ಮಾರ್ಚ್ 1ರಿಂದ 3ರವರೆಗೆ ನಡೆದ ಸಮಾರಂಭ ದೇಶವಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಸುದ್ದಿ ಮಾಡಿತ್ತು. ಎಲ್ಲೆಡೆಯೂ ಮದುವೆಗೆ ಮಾಡಿರುವ ಖರ್ಚಿನದ್ದೇ ಚರ್ಚೆಯಾಗುತ್ತಿದೆ. ಅದರೊಂದಿಗೆ ಅನಂತ್ ಅಂಬಾನಿ ಧರಿಸಿದ್ದಂತಹ ವಾಚ್ ಬೆಲೆಯಂತೂ ಗೊತ್ತಾದ ಮೇಲೆ, ಆ ಐಷಾರಾಮಿ ವಾಚ್ ಬಗ್ಗೆಯೇ ಚರ್ಚೆಯಾಗುತ್ತಿದೆ.
17,610 ಕೋಟಿ ಅಮೆರಿಕನ್ ಡಾಲರ್ ಮಾಲಕ ಹಾಗೂ ಮೆಟಾ (ಫೇಸ್‌ಬುಕ್- ಇನ್‌ಸ್ಟಾಗ್ರಾಂ) ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಅನಂತ್ ಅಂಬಾನಿ ಧರಿಸಿದ್ದ ವಾಚ್ ನೋಡಿ ಕಣ್ಣರಳಿಸಿದ್ದಾರೆ. ಜುಕರ್ ಮಾತ್ರವಲ್ಲದೇ ಅವರ ಪತ್ನಿ ಪ್ರಿಸ್ಸಿಲ್ಲಾ ಚೆನ್ ಅವರಂತೂ ಅನಂತ್ ವಾಚ್ ಕಂಡು ಮೂಕವಿಸ್ಮಿತರಾಗಿದ್ದಾರೆ. ವಾಚ್ ಬಗ್ಗೆ ಮಾರ್ಕ್ ಜುಕರ್ ಬರ್ಗ್, ಪ್ರಿನ್ಸಿಲ್ಲಾ ಹಾಗೂ ಅನಂತ್ ಅಂಬಾನಿ ನಡುವಿನ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅನಂತ್ ಅವರು ತಾವು ಧರಿಸಿರುವ ಐಷಾರಾಮಿ ವಾಚ್ ಅನ್ನು ರಿಚರ್ಡ್ ಮಿಲ್ಲೆ ವಾಚ್ ಕಂಪನಿಯವರು ಸಿದ್ಧಪಡಿಸಿರುವುದಾಗಿ ಹೇಳುತ್ತಾರೆ. ಆಗ ಮಾರ್ಕ್ ಜುಕರ್‌ಬರ್ಗ್, ಹೌದು ರಿಚರ್ಡ್ ಮಿಲ್ಲೆ ತುಂಬಾ ಸುಂದರವಾದ ಕೈಗಡಿಯಾರವನ್ನು ತಯಾರಿಸುತ್ತಾರೆ ಎಂದು ಹೇಳುತ್ತಾರೆ.
ಈ ವಾಚ್‌ನ ಬೆಲೆ ಎಷ್ಟು ಎಂದು ಕೇಳಿದರೆ ನೀವು ಒಂದು ಕ್ಷಣ ದಂಗಾಗುವುದಂತೂ ಗ್ಯಾರಂಟಿ. ಈ ಒಂದು ವಾಚ್‌ನ ಬೆಲೆಯಲ್ಲಿ ಎರಡು ಐಷಾರಾಮಿ ರಾಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಬಹುದು. ರೋಲ್ಸ್‌ರಾಯ್ ಕಾರಿನ ಬೆಲೆ 6 ರಿಂದ 7 ಕೋಟಿ ರೂಪಾಯಿ. ಅನಂತ್ ಧರಿಸಿದ್ದ ವಾಚ್ ಬೆಲೆ 15 ಕೋಟಿ ರೂಪಾಯಿ. ಈ ಗಡಿಯಾರವನ್ನು 2021ರಲ್ಲಿ ಲಾಂಚ್ ಮಾಡಲಾಯಿತು. ಈ ಗಡಿಯಾರವು ರೂಬೀಸ್ ಹಾಗೂ ಬ್ಲೂ ಸಫೈರ್ಸ್ ಬಣ್ಣಗಳಲ್ಲಿ ಮಾತ್ರ ಬರುತ್ತದೆ. ಅನಂತ್ ಅಂಬಾನಿ ಅವರು ಧರಿಸಿರುವ ವಾಚ್ 40.5 ಎಂಎಂ ಕೇಸ್ ಹೊಂದಿದ್ದು, ಗ್ರೇಡಿಯಂಟ್ ಗ್ರೇ ಡಯಲ್‌ನೊಂದಿಗೆ ಬರುತ್ತದೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕೈಗಡಿಯಾರಗಳು ಬಹಳ ಕಡಿಮೆ ಇದೆ.