ಗೂಗಲ್ ಡ್ರೈವ್ ಗೆ ಬಾಲ್ಯದ ನಗ್ನ ಫೋಟೊ ಸೇರಿಸಿದ ಟೆಕ್ಕಿ : ಜಿಮೇಲ್ ಖಾತೆ ತಡೆಹಿಡಿದ ಗೂಗಲ್


ಅಹಮದಾಬಾದ್‌: ಬಾಲ್ಯದ ನಗ್ನ ಫೋಟೊವೊಂದನ್ನು ಗೂಗಲ್ ಡ್ರೈವ್‌ಗೆ ಸೇರಿಸಿದ್ದಕ್ಕಾಗಿ ತಡೆಹಿಡಿಯಲಾಗಿದ್ದ ನೀಲ್ ಶುಕ್ಲಾ ಎಂಬುವವರ ಜಿಮೇಲ್ ಖಾತೆಯ ಸೇವೆಯನ್ನು ಮರಳಿ ಪಡೆಯಲು ಕೋರಿದ ಅರ್ಜಿಯು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್, ಗೂಗಲ್ ಇಂಡಿಯಾ (ಪ್ರೈ) ಲಿ. ಕಂಪೆನಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ನೀಲ್ ಶುಕ್ಲಾ ಅವರು ತಾವು ಎರಡು ವರ್ಷ ವಯಸ್ಸಿನ ಬಾಲಕ ಆಗಿದ್ದಾಗ ತಮ್ಮ ಅಜ್ಜಿಯ ಕೈಯಿಂದ ಸ್ನಾನ ಮಾಡಿಸಿಕೊಂಡಿದ್ದರು. ಈ ಫೋಟೊವನ್ನು ಅವರು ಗೂಗಲ್ ಡ್ರೈವ್‌ಗೆ ಸೇರಿಸಿದ್ದರು. ಶುಕ್ಲಾ ಅವರು 'ಮಕ್ಕಳ ಮೇಲಿನ ದೌರ್ಜನ್ಯದ' ಚಿತ್ರವನ್ನು ಡ್ರೈವ್‌ಗೆ ಸೇರಿಸಿದ್ದಾರೆ ಎಂದು ಗೂಗಲ್ ಕಂಪನಿಯು ಅವರ ಜಿಮೇಲ್ ಖಾತೆಯನ್ನು ತಡೆಹಿಡಿದಿದೆ.

ನ್ಯಾಯಮೂರ್ತಿ ವೈಭವಿ ಡಿ. ನಾನಾವತಿಯವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಕೂಡ ನೋಟಿಸ್‌ ಜಾರಿಗೆ ಆದೇಶಿಸಿದ್ದಾರೆ. ಶುಕ್ಲಾ ಅವರು ಕಂಪ್ಯೂಟ‌ರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಮೇಲ್ ಖಾತೆಯನ್ನು ಗೂಗಲ್ ತಡೆಹಿಡಿದಿರುವ ಕಾರಣ ಶುಕ್ಲಾಗೆ ತಮಗೆ ಬರುವ ಇಮೇಲ್‌ಗಳನ್ನು ಪರಿಶೀಲಿಸಲು ಆಗುತ್ತಿಲ್ಲ. ಇದರಿಂದಾಗಿ ಅವರ ವಹಿವಾಟಿಗೆ ನಷ್ಟ ಆಗಿದೆ ಎಂದು ಶುಕ್ಲಾ ಪರ ವಕೀಲರು ದೂರಿದ್ದಾರೆ.

ಶುಕ್ಲಾ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಗುಜರಾತ್ ಪೊಲೀಸರು ಹಾಗೂ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಾಗಿಲು ತಟ್ಟಿದ್ದರು. ಆದರೆ ಅಲ್ಲಿ ಕೂಡ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಖಾತೆಯನ್ನು ತಡೆಹಿಡಿದ ಒಂದು ವರ್ಷದ ಬಳಿಕ ಆ ಖಾತೆಯಲ್ಲಿರುವ ಎಲ್ಲಾ ಮಾಹಿತಿಗಳನ್ನು ಅಳಿಸಲಾಗುತ್ತದೆ. ಅಂದರೆ, ಈ ವರ್ಷದ ಎಪ್ರಿಲ್‌ನಲ್ಲಿ ಗೂಗಲ್ ಕಂಪೆನಿಯು ತಮ್ಮ ಖಾತೆಯಲ್ಲಿನ ಮಾಹಿತಿಯನ್ನು ಅಳಿಸಿಹಾಕಲಿದೆ. ಹೀಗಾಗಿ ತಮ್ಮ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಶುಕ್ಲಾ ಕೋರಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu