ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಡಿವೈಡರ್ ಹಾರಿ ಬಿದ್ದ ಪರಿಣಾಮ ಮತ್ತೊಂದೆಡೆಗೆ ಬಿದ್ದು ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಉಳ್ಳಾಲದ ನಾಟೆಕಲ್ ಬಳಿ ನಡೆದಿದೆ.
ಮಂಗಳೂರು ನಗರದ ಬೋಂದೇಲ್ ನಿವಾಸಿ ಶ್ರೀನಿಧಿ (29) ಬೈಕ್ ಸವಾರ ಯತೀಶ್ ದೇವಾಡಿಗ ಮೃತಪಟ್ಟ ದುರ್ದೈವಿಗಳು.
ರವಿವಾರ ನಗರದ ಹೊರವಲಯದ ಮುಡಿಪುವಿನಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ಇವರಿಬ್ಬರು ಬೈಕ್ ನಲ್ಲಿ ಹೋಗಿದ್ದರು. ಮರಳಿ ವಾಪಸ್ಸಾಗುತ್ತಿದ್ದ ವೇಳೆ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಬೈಕ್, ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಡಿದು ಡಿವೈಡರ್ ಹಾರಿ ಮತ್ತೊಂದು ಬದಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಅಪಘಾತ ಸಂದರ್ಭದಲ್ಲಿ ಇನ್ನೊಂದು ಬದಿಯ ರಸ್ತೆಗೆ ಬಿದ್ದ ಇವರಿಬ್ಬರಲ್ಲಿ ಒಬ್ಬರ ಮೇಲೆ ಅದೇ ಸಂದರ್ಭ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹಾಯ್ದಿರುವ ಸಾಧ್ಯತೆಯಿದೆ. ಇದು ಹಿಂಬದಿಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶ್ರೀನಿಧಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯತೀಶ್ ಕೂಡಾ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.