ಮಂಗಳೂರು: ನಗರದ ನಂತೂರಿನಲ್ಲಿ ಶುಕ್ರವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿಯ ಡಿವೈಡರ್ ಮೇಲೇರಿ ನಜ್ಜುಗುಜ್ಜಾದ ಪರಿಣಾಮ ಯುವಕನೋರ್ವನು ಬಲಿಯಾದ ಘಟನೆ ನಡೆದಿದೆ.
ಹಿರಿಯ ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ, ತೊಕ್ಕೊಟ್ಟು ನಿವಾಸಿ ಶಮಿತ್ ಶೆಟ್ಟಿ(29) ಮೃತಪಟ್ಟ ಯುವಕ.
ಶಮಿತ್ ಶೆಟ್ಟಿ ಶುಕ್ರವಾರ ರಾತ್ರಿ ಮಂಗಳೂರಿನ ಗೆಳೆಯನೊಬ್ಬಬ ಮನೆಯಲ್ಲಿ ನಡೆದಿದ್ದ ದೈವದ ಕೋಲದಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ನಂತೂರಿನಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೆ ಮೇಲೇರಿದೆ. ಪರಿಣಾಮ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಮಿತ್ ಮೃತಪಟ್ಟಿದ್ದಾರೆ.
ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.