ವಿಶ್ವ ಸುಂದರಿ -2024 ಸ್ಪರ್ಧೆ: ಐಶ್ವರ್ಯಾ ರೈ ಹಾಡುಗಳಿಗೆ ನೃತ್ಯ ಮಾಡಿದ ಭಾರತದ ಪ್ರತಿನಿಧಿ ಸಿನಿ ಶೆಟ್ಟಿ


ಮುಂಬೈ: 28 ವರ್ಷಗಳ ಸುದೀರ್ಘ ಸಮಯದ ಬಳಿಕ ಪ್ರತಿಷ್ಠಿತ "ವಿಶ್ವ ಸುಂದರಿ ಸ್ಪರ್ಧೆ" ಭಾರತದಲ್ಲಿ ನಡೆಯುತ್ತಿದೆ.  ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ 71ನೇ ಆವೃತ್ತಿ ಫೆ.18ರಂದು ಪ್ರಾರಂಭವಾಗಿದ್ದು, ಇದೇ ಮಾರ್ಚ್ 9ರ ವರೆಗೆ ನಡೆಯಲಿದೆ. ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ ಪ್ರತಿನಿಧಿಸುತ್ತಿದ್ದಾರೆ.

'ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್ 2022' ಸಿನಿ ಶೆಟ್ಟಿಯವರು ಸ್ಪರ್ಧೆಯ ವೇಳೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯವರ ಸುಪ್ರಸಿದ್ಧ ಹಾಡುಗಳಿಗೆ ಅದ್ಭುತವಾಗಿ ನೃತ್ಯ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 1994ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಐಶ್ವರ್ಯಾ ರೈ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಅಲಂಕರಿಸಿದ್ದಾರೆ. 

71ನೇ ವಿಶ್ವ ಸುಂದರಿ ಸ್ಪರ್ಧೆಯ 'ಟ್ಯಾಲೆಂಟ್ ಫೈನಲ್ಸ್' ರೌಂಡ್‌ ನಲ್ಲಿ ಸಿನಿ ಶೆಟ್ಟಿ ಅವರ ಪ್ರದರ್ಶನವು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರಿಗೆ ಸಲ್ಲಿಸಿದ ಗೌರವವಾಗಿದೆ. ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ನಿಂಬೂಡಾ, ತಾಲ್ ಚಿತ್ರದ ತಾಲ್ ಸೆ ತಾಲ್ ಮಿಲಾ ಮತ್ತು ಬಂಟಿ ಔರ್ ಬಬ್ಲಿ ಸಿನಿಮಾದ ಕಜ್ರಾ ರೇ ಹಾಡಿನ ಡಾನ್ಸ್ ಸೋಷಿಯಲ್‌ ಮೀಡಿಯಾದಲ್ಲಿ ಸಿನಿ ಶೆಟ್ಟಿ ತಮ್ಮ ಸ್ಪರ್ಧೆಯ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಐಶ್ವರ್ಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರು ತಮ್ಮ ಮೇಲೆ ಬೀರಿರುವ ವಿಚಾರವನ್ನು ಬಹಿರಂಗಪಡಿಸಿದರು. ಅಲ್ಲದೇ ಐಶ್ವರ್ಯಾ ಬಾಲಿವುಡ್‌ನಲ್ಲಿ ಪ್ರತಿಭೆಯ ಸಂಕೇತವೆಂದು ಹೇಳಿದ್ದಾರೆ. ಭಾರತೀಯ ಶಾಸ್ತ್ರೀಯ ಮತ್ತು ಬಾಲಿವುಡ್ ನೃತ್ಯ ಶೈಲಿಗಳನ್ನು ಸಂಯೋಜಿಸಿ ಸಿನಿ ಶೆಟ್ಟಿ ಡ್ಯಾನ್ಸ್ ಮಾಡಿದ್ದು, ಇದು ಐಶ್ವರ್ಯಾ ಅವರ ಪರಂಪರೆಗೆ ಸಂದ ಗೌರವವಾಗಿದೆ.

ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸಿನಿ ಶೆಟ್ಟಿ ಗೌರವ ಸಲ್ಲಿಸಿದ ರೀತಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ಅವರ ಪ್ರತಿಭೆಯನ್ನು ಶ್ಲಾಘಿಸಿದರು. ಜೊತೆಗೆ ಬಾಲಿವುಡ್‌ನಲ್ಲಿ ಉಜ್ವಲ ಭವಿಷ್ಯ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿ ಶೆಟ್ಟಿಯ ನೃತ್ಯ ಕೌಶಲ್ಯವನ್ನು ಶ್ಲಾಘಿಸಿ, ಬಾಲಿವುಡ್ ಸೂಪರ್ ಸ್ಟಾರ್ ಆಗೋ ಎಲ್ಲಾ ಲಕ್ಷಣಗಳಿವೆ ಎಂಬರ್ಥದಲ್ಲಿ ಕಾಮೆಂಟ್‌ಗಳು ಹರಿದುಬಂದಿವೆ. ಮಾರ್ಚ್ 9ರಂದು ಮುಂಬೈನಲ್ಲಿ ನಡೆಯಲಿರುವ ವಿಶ್ವ ಸುಂದರಿ 2024 ಫಿನಾಲೆ ಮೇಲೆ ಎಲ್ಲರ ಕಣ್ಣಯ ನೆಟ್ಟಿದೆ.
BREAKING NEWS
Loading latest news...
Join our WhatsApp Channel Powered By : Online Pudu