ಹೆಜ್ಜೇನು ಗೂಡಿಗೆ ಕ್ರಿಕೆಟ್ ಚೆಂಡು: ಜೇನುನೊಣಗಳ ದಾಳಿಗೆ ದಿಕ್ಕಾಪಾಲಾಗಿ ಓಡಿದ ಆಟಗಾರರು, ಕ್ರಿಕೆಟ್ ಟೂರ್ನಮೆಂಟೇ ರದ್ದು

ಉಳ್ಳಾಲ: ಕ್ರಿಕೆಟ್ ಆಟವಾಡುತ್ತಿದವರ ಮೇಲೆಯೇ ಹೆಜ್ಜೇನು ದಾಳಿ‌ನಡೆಸಿದ ಪರಿಣಾಮ ಕ್ರಿಕೆಟ್ ಟೂರ್ನಮೆಂಟ್ ಅರ್ಧಕ್ಕೆ ನಿಂತ ಪ್ರಸಂಗ ಉಳ್ಳಾಲದ ಒಂಭತ್ತುಕೆರೆಯಲ್ಲಿ ನಡೆದಿದೆ.

ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಬ್ಯಾಟ್ಸ್‌ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದಿದೆ. ಪರಿಣಾಮ ಜೇನುನೊಣಗಳು ಗುಂಪುಗುಂಪಾಗಿ ದಾಳಿ ನಡೆಸಿದೆ. ಜೇನು ನೊಣಗಳ ದಾಳಿಯಿಂದ ತಪ್ಪಿಸಲು ಕ್ರಿಕೆಟ್ ಆಟಗಾರರೆಲ್ಲಾ ದಿಕ್ಕಾಪಾಲಾಗಿ ಓಡಿದ್ದಾರೆ.


ರವಿವಾರ ಒಂಬತ್ತುಕೆರೆಯ అనిల ಕಂಪೌಂಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿತ್ತು‌. ಈ ವೇಳೆ ಎಸ್.ಆರ್.ಜಿ.ಟಿ. ತಂಡದ ಮಹೇಶ್ ಎಂಬವರು ಹೊಡೆದ ಚೆಂಡು ನೇರವಾಗಿ ತೆಂಗಿನ ಮರದಲ್ಲಿ ಕಟ್ಟಿದ್ದ ಹೆಜ್ಜೇನಿನ ಗೂಡಿಗೆ ಬಿದ್ದಿದೆ. ಪರಿಣಾಮ ಜೇನು ನೊಣಗಳು ಹಿಂಡೇ ಮಹೇಶ್ ಮೇಲೆ ದಾಳಿ‌ನಡೆಸಿದೆ. ದಾಳಿಯಿಂದ ರಕ್ಷಿಸಿಕೊಳ್ಳಲು ಮಹೇಶ್ ಮೈದಾನವಿಡೀ ಓಡಿದ್ದಾರೆ. ಉಳಿದ ಆಟಗಾರರನ್ನೂ ಹುಳುಗಳು ಬೆನ್ನಟ್ಟಿದ್ದು ಕ್ರಿಕೆಟ್ ಟೂರ್ನಿಯೇ ರದ್ದುಗೊಂಡಿದೆ. ಆಟಗಾರರೆಲ್ಲಾ ಓಡಿ ಜಾಗವನ್ನೇ ಖಾಲಿ ಮಾಡಿದ್ದಾರೆ. ಘಟನೆಯಿಂದ ಕುತ್ತಾರು ನಿವಾಸಿ ಮಹೇಶ್ ಗಾಯಗೊಂಡಿದ್ದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.