ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ - ದಯೆ ತೋರಿದ ಭಿಕಾರಿಯಿಂದಲೇ ನಡೆಯಿತು ಕೊಲೆ
Tuesday, January 30, 2024
ವಾಷಿಂಗ್ಟನ್: ತನಗೆ ಊಟ ನೀಡಿ ಸಹಾಯ ಮಾಡುತ್ತಿದ್ದ ಭಿಕಾರಿಯೊಬ್ಬನು ಎಂಬಿಎ ವ್ಯಾಸಂಗ ಮಾಡುತ್ತಾ ಕೆಲಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
ವಿವೇಕ್ ಸೈನಿ (25) ಎಂಬ ಭಾರತೀಯ ವಿದ್ಯಾರ್ಥಿ ಅಮೆರಿಕದಾ ಜಾರ್ಜಿಯಾದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಈತ ಬಿಡುವಿನ ವೇಳೆಯಲ್ಲಿ ಅಲ್ಲೇ ಇರುವ ಅಂಗಡಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ. ಈ ವೇಳೆ ಮನೆ ಮಠ ಇಲ್ಲದ ಭಿಕಾರಿಯೊಬ್ಬ ಊಟ ಕೇಳಿಕೊಂಡು ಬರುತ್ತಿದ್ದ. ಈತನಿಗೆ ವಿವೇಕ್ ಸೈನಿ ದಿನಾವೂ ತಿನ್ನಲು ಆಹಾರ ಉಚಿತವಾಗಿ ನೀಡುತ್ತಿದ್ದ. ಆದರೆ ಭಿಕಾರಿ ಮಾದಕ ವ್ಯಸನಿ ಎಂಬುದು ಯಾವಾಗ ವಿವೇಕ್ ಸೈನಿಗೆ ಗೊತ್ತಾಯಿತೋ ಅಲ್ಲಿಂದ ಆತನಿಗೆ ಆಹಾರ ನೀಡುವುದನ್ನು ಬಿಟ್ಟುಬಿಟ್ಟಿದ್ದಾನೆ. ಇದರಿಂದ ಕುಪಿತನಾದ ವ್ಯಕ್ತಿ ಈತನ ಹತ್ಯೆಗೆ ಸಂಚು ರೂಪಿಸಿದ್ದ. ಒಂದು ದಿನ ನೇರವಾಗಿ ವಿವೇಕ್ ಸೈನಿ ಇರುವ ಅಂಗಡಿಗೆ ಪ್ರವೇಶಿಸಿದ ಆತ ವಿವೇಕ್ ಸೈನಿಯ ತಲೆಗೆ ಸುತ್ತಿಗೆಯಿಂದ ದಾಳಿ ಮಾಡಿದ್ದಾನೆ.
ಈತ ಒಂದಲ್ಲ ಎರಡಲ್ಲ ಬರೋಬ್ಬರಿ ಐವತ್ತು ಭಾರಿ ವಿವೇಕ್ ಸೈನಿಯ ತಲೆ, ಮುಖಕ್ಕೆ ಹೊಡೆದು ಹತ್ಯೆ ಮಾಡಿದ್ದಾನೆ. ತಕ್ಷಣ ಅಂಗಡಿಯಲ್ಲಿದ್ದ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತ ವಿವೇಕ್ ಸೈನಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿಯನ್ನು ಜೂಲಿಯನ್ ಎಂದು ಗುರುತಿಸಲಾಗಿದ್ದು ಸದ್ಯ ಪೋಲೀಸರ ವಶದಲ್ಲಿದ್ದಾನೆ.
ವಿವೇಕ್ ಸೈನಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಭಾರತಕ್ಕೆ ಬರಬೇಕಿತ್ತು. ಆದರೆ ಇದರ ನಡುವೆಯೇ ಆತನ ಹತ್ಯೆ ನಡೆದಿರುವುದು ಕುಟುಂಬದಲ್ಲಿ ಆಘಾತ ಮನೆಮಾಡಿದೆ. ಮೃತದೇಹವನ್ನು ಭಾರತಕ್ಕೆ ತರುವಂತೆ ವ್ಯವಸ್ಥೆ ನಡೆಸಲಾಗುತ್ತಿದೆ.