-->
1000938341
ಮಂಗಳೂರು: "ಗೃಹಸಚಿವ ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ..."

ಮಂಗಳೂರು: "ಗೃಹಸಚಿವ ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ..."


ಮಂಗಳೂರು: ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ... ದಲಿತ ಎಂಬಂತಹ ಮಾತುಗಳು ಕೇಳಿಬರುತ್ತಿರುತ್ತದೆ‌‌. ಇಂತಹ ಕೀಳರಿಮೆಯನ್ನು ತೊಡೆದು ಹಾಕಬೇಕಾದಲ್ಲಿ ನಾವೆಲ್ಲಾ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರಿಯುತ್ತದೆ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಯುತರಾಗಲು ಸಾಧ್ಯ. ಆದ್ದರಿಂದ ಆದಿದ್ರಾವಿಡ ಸಮಾಜದ ಪ್ರತೀ ಮನೆಯಿಂದ ಒಬ್ಬನನ್ನಾದರೂ ಪದವೀಧರರನ್ನಾಗಿಸುವ ಸಂಕಲ್ಪವನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ರಾಜ್ಯ ಆದಿದ್ರಾವಿಡ ಸಮಾವೇಶದಲ್ಲಿ ಮಾತನಾಡಿದ ಅವರು, ನಾನೂ ಆದಿದ್ರಾವಿಡ ಸಮುದಾಯದಿಂದ ಬಂದವನು. ಆದರೆ ನಾನು ಹೊರದೇಶಕ್ಕೆ ಹೋಗಿ ಶಿಕ್ಷಣ ಪಡೆಯುವಷ್ಟು ನನ್ನ ತಂದೆ ಶಿಕ್ಷಣದ ಬಗ್ಗೆ ಒಲವು ಇರಿಸಿಕೊಂಡಿದ್ದರು. ಬಳಿಕ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ 35ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ. ಸಚಿವನಾಗಿದ್ದೇನೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರಾಜ್ಯದಲ್ಲಿ ಮೂರು ಬಾರಿ ಗೃಹ ಸಚಿವನಾಗಿ ದಾಖಲೆ ಬರೆದಿದ್ದೇನೆ. ಕಷ್ಟ ಎಲ್ಲರಿಗೂ ಇದ್ದದ್ದೇ. ಆದರೆ ಆ ಕಷ್ಟದಲ್ಲೂ ಎಲ್ಲರೂ ವಿದ್ಯಾವಂತರಾಗಬೇಕು. ಒಂದು ಹೊತ್ತು ಊಟ ಬಿಟ್ಟುಬಿಡಿ. ಅದೇ ಹಣದಿಂದ ನಿಮ್ಮ ಮನೆಯ ಮಗ ಅಥವಾ ಮಗಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಕರೆ ನೀಡಿದರು‌‌.

ನಿಮ್ಮದೇ ಆದಿದ್ರಾವಿಡ ಸಮುದಾಯಕ್ಕೆ ಸೇರಿದವನು ಗೃಹಸಚಿವನಾಗಿ ಈ ರಾಜ್ಯದಲ್ಲಿ ನಿಮ್ಮ ಪ್ರತಿನಿಧಿಯಾಗಿ ಇದ್ದಾನೆ ಎಂದು ತಿಳಿಯಿರಿ. ಆ ಕಾರಣದಿಂದಲೇ ನಾನು ಈ ಸಮಾವೇಶಕ್ಕೆ ಬಂದಿದ್ದೇನೆ. ಈ ದೇಶದ ವರ್ಣಾಶ್ರಮ ವ್ಯವಸ್ಥೆಯಲ್ಲಿ ನಮ್ಮನ್ನು ಶೂದ್ರರು ಅತೀ ಶೂದ್ರರು ಎಂದು ಹೊರಗಿಟ್ಟಿದ್ದಾರೆ. ನಮ್ಮನ್ನು ಅತ್ಯಂತ ಕೀಳುಮಟ್ಟದಲ್ಲಿ ನೋಡಲಾಗುತ್ತಿದೆ‌. ಇಂದು ಒಂದಿಷ್ಟು, ಸ್ಥಾನಮಾನ ಗೌರವ ಅಂಥ ಹೇಳೋದಿಲ್ಲ, ಒಂದು ಗುರುತಿಸುವಿಕೆ ಇದೆಯೆಂದರೆ ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ನೀಡಿದ್ದೇ ಕಾರಣ ಎಂದರು.

ಇಂದು ನನ್ನ ಮುಂದೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದೀರಿ. ನಿಮ್ಮ ಸಮುದಾಯದಲ್ಲೊಬ್ಬನಾಗಿ ನಾನು ಈ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಪಡುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ಅವರು ಸಮುದಾಯದ ಮುಂದೆ ಭರವಸೆ ನೀಡಿದರು.



Ads on article

Advertise in articles 1

advertising articles 2

Advertise under the article