ಮುಲ್ಕಿ: ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಮೇಲೇರಿ ಮೂವರಿಗೆ ಡಿಕ್ಕಿ - ರಿಕ್ಷಾ,ಸ್ಕೂಟರ್ ಗೆ ಹಾನಿ

ಮುಲ್ಕಿ: ನಿಯಂತ್ರಣ ತಪ್ಪಿದ ಲಾರಿಯೊಂದು ಹೆದ್ದಾರಿಯ ಡಿವೈಡರ್ ಜಂಪ್ ಮಾಡಿ ಮಾರ್ಗದ ಬದಿಯಲ್ಲಿರುವ ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. 

ಅಪಘಾತದಿಂದ ಸ್ಕೂಟ‌ರ್ ಸವಾರ ಉತ್ತರ ಕರ್ನಾಟಕ ಮೂಲದ ಬಪ್ಪನಾಡು ಬಳಿ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್ ಸಂಗಪ್ಪ(57) ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ ಗೀತಾ (42), ಆಟೋ ಚಾಲಕ ಧರ್ಮೇಂದ್ರ (35) ಗಾಯಗೊಂಡು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಡುಪಿಯಿಂದ ಮಂಗಳೂರು ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಲಾರಿ ಮುಲ್ಕಿ ಜಂಕ್ಷನ್ ತಲುಪುತ್ತಿದ್ದಂತೆ ಬ್ಯಾರಿ ಕೇಡ್‌ ತಪ್ಪಿಸಲು ಯತ್ನಿಸಿ, ಲಾರಿ ಚಾಲಕನ ನಿಯಂತ್ರಣ ತಪ್ಪಿ ನೇರ ಎಡಬದಿಯ ಡಿವೈಡರ್ ಮೇಲೇರಿದೆ. ಈ ವೇಳೆ ಅಲ್ಲಿಯೇ ಸಮೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ ಅವರಿಗೆ ಡಿಕ್ಕಿ ಹೊಡೆದು ಮತ್ತೆ ಸರ್ವಿಸ್ ರಸ್ತೆಯಲ್ಲಿ ಸಂಚಾರದಲ್ಲಿದ್ದ ಸ್ಕೂಟ‌ರ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಸ್ಕೂಟರನ್ನು ಎಳೆದುಕೊಂಡು ಹೋಗಿ ಬದಿಯಲ್ಲಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಅಲ್ಲಿಗೂ ಲಾರಿ ನಿಲ್ಲದೆ ಪುನಃ ಬಲಬದಿಗೆ ಡಿವೈಡರ್ ಮೇಲೇರಿ ಹೆದ್ದಾರಿಯಲ್ಲಿ ಬಂದು ನಿಂತಿದೆ.

ಕಲವೇ ಕ್ಷಣಗಳಲ್ಲಿ ಅಪಘಾತ ನಡೆದು ಹೋಗಿದೆ. ಅಪಘಾತದಿಂದ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯ ಬದಿಯಲ್ಲಿ ಕುಳಿತಿದ್ದ ಉತ್ತರ ಕರ್ನಾಟಕದ ಅನೇಕ ಕೂಲಿ ಕಾರ್ಮಿಕರು ಜೀವ ಭಯದಿಂದ ಓಡಿದ್ದರಿಂದ ಪವಾಡ ಸದೃಶವಾಗಿ ಅವರು ಪಾರಾಗಿದ್ದಾರೆ.

ಅಪಘಾತದ ರಭಸಕ್ಕೆ ಸ್ಕೂಟರ್ ಹಾಗೂ ಆಟೋಗೆ ಹಾನಿಯಾಗಿದ್ದು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu