ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ವಿವಾಹಿತೆ - ಬ್ಯಾಚುಲರ್ ದುರಂತ ಸಾವು




ಬೆಂಗಳೂರು: ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಕೇರಳದ ಯುವಕ ಹಾಗೂ ಪಶ್ಚಿಮ ಬಂಗಾಳದ ಯುವತಿ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಸುಟ್ಟ ರೀತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.

ಕೇರಳದ ಇಡುಕ್ಕಿ ಮೂಲದ ಅಬಿಲ್ ಅಬ್ರಾಹಂ (29) ಮತ್ತು ಕೋಲ್ಕತದ ಸೌಮಿನಿ ದಾಸ್ (20) ಮೃತಪಟ್ಟ ದುರ್ದೈವಿಗಳು. ಇವರು ಬೆಂಗಳೂರಿನ ಕೊತ್ತನೂರು ದೊಡ್ಡಗುಬ್ಬಿಯಲ್ಲಿರುವ ಅಪಾರ್ಟ್ ಮೆಂಟ್‌ನಲ್ಲಿ ತಾವು ವಾಸವಿದ್ದ ಫ್ಲ್ಯಾಟ್‌ನಲ್ಲಿ ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಈ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಸೌಮಿನಿ ಸ್ಥಳದಲ್ಲೇ ಮೃತಪಟ್ಟರೆ, ಅಬಿಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಮೂರು ದಿನಗಳ ಹಿಂದಷ್ಟೇ ಇಬ್ಬರೂ ಸಹಜೀವನ ನಡೆಸಲು ಆರಂಭಿಸಿದ್ದರು. ಈಗಾಗಲೇ ಮದುವೆಯಾಗಿದ್ದ ಸೌಮಿನಿ ದಾಸ್, ಮಾರತಹಳ್ಳಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸ್ವತಂತ್ರವಾಗಿ ಬದುಕಲು ಬಿಡದ ಕಾರಣ ನಿನ್ನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲವೆಂದು ಪತಿಯನ್ನು ತೊರೆದಿದ್ದಾಳೆ. ತಾನು ಲಿವಿಂಗ್ ಟುಗೆದರ್‌ನಲ್ಲಿದ್ದು, ಆತನೊಂದಿಗೆ ಉಳಿದ ಜೀವನ ಸಾಗಿಸುವುದಾಗಿ ಸೌಮಿನಿ, ತನ್ನ ಪತಿಗೆ ಹೇಳಿದ್ದಳು ಎಂದು ಹೇಳಲಾಗಿದೆ.

ಮತ್ತೊಂದೆಡೆ ಕೇರಳದಲ್ಲಿ ಹೋಂ-ನರ್ಸಿಂಗ್ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂಗೆ ಸೌಮಿನಿ ಮೂರು ತಿಂಗಳ ಹಿಂದೆಯಷ್ಟೇ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಬಳಿಕ ಫ್ಲ್ಯಾಟ್ ನಲ್ಲಿ ಒಟ್ಟಿಗೆ ಸಹಜೀವನ ನಡೆಸುತ್ತಿದ್ದರು. ಇಬ್ಬರ ನಡುವೆ ಏನಾಯಿತೇನೋ ಗೊತ್ತಿಲ್ಲ. ಭಾನುವಾರ ಮಧ್ಯಾಹ್ನ 12.45ರಲ್ಲಿ ಫ್ಲ್ಯಾಟ್‌ನಿಂದ ಚೀರಾಟ ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿದೆ. ಅಕ್ಕಪಕ್ಕದ ನಿವಾಸಿಗಳು ಗಮನಿಸಿ ಅಗ್ನಿ ಶಾಮಕ ಮತ್ತು ನಮ್ಮ 112ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಬಂದು ನೋಡುವಷ್ಟರಲ್ಲಿ ಸೌಮಿನಿ ದಾಸ್ ಸಂಪೂರ್ಣ ಸುಟ್ಟು ಮೃತಪಟ್ಟಿದ್ದಳು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಅಭಿಲ್ ಅಬ್ರಾಹಂ ಅಬ್ರಹಾಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಮತ್ತು ಇಬ್ಬರ ಮೊಬೈಲ್ ಫೋನ್‌ಗಳನ್ನು ಪರೀಕ್ಷಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu