-->
1000938341
ಸಾವು ಗೆದ್ದು ಬಂದ ಶ್ರಮಿಕರು: 17 ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಸುರಂಗದಿಂದ ಪಾರು

ಸಾವು ಗೆದ್ದು ಬಂದ ಶ್ರಮಿಕರು: 17 ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಸುರಂಗದಿಂದ ಪಾರು

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್​ಯಾರ್​ ನಲ್ಲಿ ಸುರಂಗದೊಳಗೆ ಸಿಲುಕಿಕೊಂಡು ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೊರಬರುವ ನಿರೀಕ್ಷೆಯಿಂದೆ ಕಾದು ಕುಳಿತ್ತಿದ್ದ ಎಲ್ಲ 41 ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಇಂದು ಹೊರಕರೆತರಲಾಗಿದೆ. 17 ದಿನಗಳ ನಿರಂತರ ಶ್ರಮ ಹಾಗೂ ಶತಕೋಟಿ ಜನರ ಪ್ರಾರ್ಥನೆಗೆ ಫಲ ದೊರಕಿದೆ‌. ಈ ಮೂಲಕ ಬಹುದೊಡ್ಡ ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಸಾಧಿಸಿದೆ.

ಸುಮಾರು 50 ಮೀ.ಗೂ ಅಧಿಕ ದೂರದಲ್ಲಿದ್ದ ಸುರಂಗದೊಳಗಡೆ ಎಲ್ಲಾ 41 ಕಾರ್ಮಿಕರು ಸಿಲುಕಿದ್ದರು.  ಒಬ್ಬೊಬ್ಬರಾಗಿ ಎಲ್ಲಾ ಕಾರ್ಮಿಕರನ್ನು ಪೈಪ್​ ಮೂಲಕ ಗಾಲಿ ಸ್ಟ್ರೆಚರ್​ ಸಹಾಯದಿಂದ ರಕ್ಷಣಾ ತಂಡ ಹೊರಗೆಳೆದು ರಕ್ಷಣೆ ಮಾಡಿದವು. ಹೊರಗೆ ಬಂದಿರುವ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಅಡಿಯಲ್ಲಿ ದೇಹ ಪರೀಕ್ಷೆ ಮಾಡಿ ತಕ್ಷಣ ಆಂಬ್ಯುಲೆನ್ಸ್​ಗಳ ಸಹಾಯದಿಂದ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲ ಕಾರ್ಮಿಕರು ಆರೋಗ್ಯಯುತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಪ್ರತೀ ಹಂತದಲ್ಲೂ ತಲಾ ನಾಲ್ವರು ಕಾರ್ಮಿಕರನ್ನು ಹೊರಗೆ ಕರೆತರಲಾಗಿದೆ. ಕಾರ್ಮಿಕರ ರಕ್ಷಣೆಗೆ ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು. ಎಲ್ಲರ ಪ್ರಾರ್ಥನೆ ಫಲಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಸುತ್ತಲೂ ಜೈಕಾರಗಳು ಮೊಳಗಿದವು ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಸಿಹಿ ಹಂಚಿ ಸಂಭ್ರಮಿಸಿದರು.

ನುರಿತ ಕಾರ್ಮಿಕರ ತಂಡವು ಇಲಿ-ಕುಳಿ ಗಣಿಗಾರಿಕೆ ತಂತ್ರವನ್ನು ಬಳಸಿಕೊಂಡು ಕೈಯಿಂದ ರಂಧ್ರ ಕೊರೆಯುವ ಮೂಲಕ ಅಂತಿಮ ಹಂತದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. 800-ಎಂಎಂ ವ್ಯಾಸದ ಪೈಪ್ ಅನ್ನು ಆಗರ್ ಯಂತ್ರದಿಂದ ಅವಶೇಷಗಳ ಮೂಲಕ ಸೇರಿಸಲಾಯಿತು. ಅದರ ಮೂಲಕ ಕಾರ್ಮಿಕರನ್ನು ಹೊರಗೆ ಕರೆತರಲಾಗಿದೆ. ಈ ಮೊದಲು ಬೃಹತ್ ಆಗರ್ ಯಂತ್ರದ ಮೂಲಕ ಈ ಕೊರೆತವನ್ನು ನಡೆಸಲಾಗಿತ್ತು. ಆದರೆ, ಕಳೆದ ಶುಕ್ರವಾರ ಈ ಯಂತ್ರವು 47 ಮೀಟರ್‌ನಲ್ಲಿ ಅವಶೇಷಗಳಡಿ ಸಿಲುಕಿ ಛಿದ್ರವಾಗಿತ್ತು.

ಕುಸಿದ ಸುರಂಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಒಬ್ಬೊಬ್ಬರಾಗಿ ಹೊರಗೆಳೆದು ರಕ್ಷಣೆ ಮಾಡಲಾಯಿತು. ಪೈಪ್​ಗಳನ್ನು ವೆಲ್ಡಿಂಗ್​ ಮಾಡಿರುವ ಕಾರಣ ಕಾರ್ಮಿಕರು ತೆವಳುವಾಗ ತರಚಿ ಗಾಯಗಳಾಗಬಹುದು ಎಂಬ ಕಾರಣಕ್ಕೆ ಗಾಲಿ ಸ್ಟ್ರೆಚರ್​ ಸಹಾಯದಿಂದ ಹೊರಗೆ ಕರೆತರಲಾಯಿತು. ಕಳೆದ 17 ದಿನಗಳಿಂದ ಯಾವುದೇ ನೈಸರ್ಗಿಕ ಬೆಳಕು ಮತ್ತು ಸಂಪೂರ್ಣ ಊಟವಿಲ್ಲದೆ ಸುರಂಗದ ಭಗ್ನಾವಶೇಷಗಳ ಅಡಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ನಿತ್ರಾಣಗೊಂಡಿರುವ ಕಾರ್ಮಿಕರಿಗೆ ತೆವಳುವುದು ತುಂಬಾ ಕಷ್ಟ. ಹೀಗಾಗಿ ಗಾಲಿ ಸ್ಟ್ರೆಚರ್​ ರಕ್ಷಣಾ ಕಾರ್ಯಕರ್ತರ ಪ್ರಧಾನ ಆಯ್ಕೆಯಾಗಿತ್ತು.

ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು.




Ads on article

Advertise in articles 1

advertising articles 2

Advertise under the article