ನಿಮ್ಮ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲಿ ಒಪ್ಕೊಳ್ತೀರಾ? ಮಹಿಷ ದಸರಾ ಮಾಡುವವರಿಗೆ ಪ್ರತಾಪ್ ಸಿಂಹ ಪ್ರಶ್ನೆ



ಮೈಸೂರು: ಮಹಿಷ ದಸರಾ ಹೆಸರಿನಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ. ಆ ಕಾರಣಕ್ಕೆ ನಾನು ಮಹಿಷ ದಸರಾವನ್ನು ವಿರೋಧ ಮಾಡುತ್ತಿದ್ದೇನೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಫೇಸ್​ಬುಕ್​​ ಲೈವ್​​ನಲ್ಲಿ ಮಹಿಷ ದಸರಾ ಆಚರಣೆ ಮಾಡುವವರ ವಿರುದ್ಧ ಹರಿಹಾಯ್ದ ಸಂಸದ ಪ್ರತಾಪ್ ಸಿಂಹ, ಬೆಟ್ಟಕ್ಕೆ ಬಂದು ಮಹಿಷ ಒಳ್ಳೆಯವನೆಂದಷ್ಟೇ ಹೇಳಿ ಹೋಗುವುದಿಲ್ಲ. ಚಾಮುಂಡಿಗೆ ರವಿಕೆ ತೊಡಿಸುವವನು ಪುರುಷ, ಸೀರೆ ಉಡಿಸುವವನು ಪುರುಷ ಎಂದು ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾರಾದರೂ ಒಪ್ಪಿಕೊಳ್ಳುತ್ತೀರಾ? ಮಹಿಷನನ್ನು ಒಳ್ಳೆಯವನೆಂದು ಬಿಂಬಿಸಲು ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಂತಹವರನ್ನು ತಡೆಯಲು ನಾನು ವಿರೋಧ ಮಾಡುತ್ತಿದ್ದೇನೆಂದು ತಿಳಿಸಿದರು.

ಚಾಮುಂಡೇಶ್ವರಿಗೆ ಹೋಗಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷ ದಸರಾಗೆ ವಿರೋಧ ಮಾಡಬೇಕು. ಇಲ್ಲದಿದ್ದರೆ ತಾಯಿ ಚಾಮುಂಡಿ ಮುಂದೆ ಬೇಡಿಕೊಳ್ಳಲು ನಿಮಗೆ ಯಾವ ನೈತಿಕ ಹಕ್ಕು ಇರುವುದಿಲ್ಲ. ನನ್ನನ್ನು ದಲಿತ ವಿರೋಧಿ ಎಂದು ಹೇಳುತ್ತಾರೆ. ವಿಚಾರ ಇಲ್ಲದಿದ್ದಾಗ ಈ ರೀತಿ ಉಗುಳುತ್ತಾರೆ. ಮಹಿಷನ ಬಗ್ಗೆ ಯಾವುದೇ ದಾಖಲೆಯಿಲ್ಲ. ಈಗ ದಲಿತ ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಅಶೋಕಪುರಂನ ಪ್ರತಿಯೊಬ್ಬರ ಮನೆಯಲ್ಲಿರುವುದು ಚಾಮುಂಡೇಶ್ವರಿ ದೇವಿ ಫೋಟೋ ಹೊರತೂ ಮಹಿಷನ ಪೋಟೋ ಅಲ್ಲ. ದಲಿತರೇ ಚಾಮುಂಡಿ ಹಬ್ಬವನ್ನು ಹೆಚ್ಚಾಗಿ ಆಚರಣೆ ಮಾಡುತ್ತಾರೆ. ಈಗ ರಾಜಕೀಯಕ್ಕೆ ದಲಿತ ವಿರೋಧಿ ಎನ್ನುತ್ತಾರೆ. ಮಹಿಷ ಯಾವಾಗ ದಲಿತನಾದ? ಮಹಿಷ ಬೌದ್ಧ ಬಿಕ್ಕು ಆಗಿದ್ದ ಎಂದು ಹೇಳುತ್ತಾರೆ. ತಾಯಿ ಚಾಮುಂಡಿ ಉಲ್ಲೇಖ ಬರುವುದು ಕೃತ ಯುಗದಲ್ಲಿ. ಆದರೆ, ಬುದ್ಧ ಬಂದಿದ್ದು ಕಲಿಯುಗದಲ್ಲಿ. ಅಶೋಕ ಇದ್ದಿದ್ದು ಕ್ರಿ.ಪೂ 3 ನೇ ಶತಮಾನದಲ್ಲಿ. ಇವರು ಹೇಳುವ ವಿಚಾರ ಸಮಯಕ್ಕೆ ತಾಳಮೇಳವೇ ಇಲ್ಲ. ಇದೆಲ್ಲ ಕಪೋಲ ಕಲ್ಪಿತ ವಿಚಾರಗಳು ಎಂದು ಪ್ರತಾಪ್​ ಸಿಂಹ ಹೇಳಿದರು.

ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲ ಮಾಡ್ತಿದ್ದಾರೆ. ಕೆಲವರು ನನ್ನ ಬಗ್ಗೆ ವಿರೋಧ ಮಾಡ್ತಿದ್ದಾರೆ. ಇದೆಲ್ಲವೂ ವೈಯಕ್ತಿಕ ಲಾಭ-ನಷ್ಟದಿಂದ ಆಗಿರುವಂಥದ್ದು. ನಿಜವಾದ ದಲಿತ ವಿರೋಧಿಗಳು ನೀವುಗಳು. ಬಿ.ಟಿ. ಲಲಿತ ನಾಯಕ್​ರಿಂದ ಉದ್ಘಾಟನೆ ಮಾಡಿಸಲು ಮುಂದಾಗಿದ್ದೀರಿ. ಆಕೆಯ ಪುತ್ರ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ್ದ. ನೀವು ಅಂಬೇಡ್ಕರ್​ ವಾದಿಗಳು ಎಂದು ಹೇಳುತ್ತೀರಿ. ಆದರೆ ಅಂಬೇಡ್ಕರ್ ಪುತ್ಥಳಿಗೆ ಹೆಂಡ ಕುಡಿಸಿದವನ ತಾಯಿಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ ಎಂದು ಟೀಕಿಸಿದರು.

ಮೈಸೂರಿಗರ ಹತ್ತಿರ ಹೋರಾಟದ ಗುಣ ಇಲ್ಲ ಎಂದು ಅಂದುಕೊಳ್ಳಬೇಡಿ. ನಿಮ್ಮ‌ ಮನೆಯಲ್ಲಿ ನಿಮ್ಮ ಪತ್ನಿಯೇ ಮಹಿಷನ ಫೋಟೋ ಇಟ್ಟುಕೊಳ್ಳೊಕೆ ಬಿಡ್ತಾರಾ? ನಿಮ್ಮ ಮನೆಯಲ್ಲಿ ಬೇಕಾದರೆ ಮಹಿಷ ದಸರಾ ಮಾಡಿಕೊಳ್ಳಿ. ಬೆಟ್ಟಕ್ಕೆ ಹೋಗಿ ಚಾಮುಂಡಿ ದೇವಿಗೆ ಅಪಮಾನ ಮಾಡಬೇಕು ಎಂದು ನೀವು ಅಲ್ಲಿ ಹೋಗೋದು? ಕೆಲವರಿಗೆ ಅರ್ಥವಾಗಬೇಕು ಎಂದು ನಿಮ್ಮ ಭಾಷೆಯಲ್ಲಿ ಹೇಳುತ್ತಿದ್ದೇನೆ. ಇಂಥವರನ್ನು ಈಗಲೇ ವಿರೋಧಿಸದಿದ್ದರೆ ಮುಂದೆ ಇಸ್ರೆಲ್ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
BREAKING NEWS
Loading latest news...
Join our WhatsApp Channel Powered By : Online Pudu