ಸುರತ್ಕಲ್: ರಿಯಲ್ ಎಸ್ಟೇಟ್, ಫೈನಾನ್ಸ್ ಉದ್ಯಮಿ ಶಂಕಾಸ್ಪದ ರೀತಿಯಲ್ಲಿ ಸಾವು


ಮಂಗಳೂರು: ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಯುವಕನೋರ್ವ ನಗರದ ಹೊರವಲಯದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬಳಿ ಸಂಶಯಾಸ್ಪದವಾಗಿ ದಿಢೀರ್ ಕುಸಿದು ಮೃತಪಟ್ಟ ಘಟನೆ ನಡೆದಿದೆ.

ಫೈನಾನ್ಸ್, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸಸಿಹಿತ್ಲು ನಿವಾಸಿ ಸಚಿನ್ ಕುಕ್ಯಾನ್ (40) ಮೃತಪಟ್ಟವರು. ಅ.19ರಂದು ಮಧ್ಯಾಹ್ನ ಸಚಿನ್ ಕುಟುಂಬದ ಬಾಬ್ತು ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಅನ್ನದಾನದ ಬಳಿಕ ಸಚಿನ್ ಅವರು ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದು ಬಿಟ್ಟು ಬಂದಿದ್ದರು. ಬಳಿಕ ಕುದ್ರೋಳಿ ದೇವಸ್ಥಾನಕ್ಕೆಂದು ಹೊರಡಲು ನಡೆಸುತ್ತಿದ್ದರು. 

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿನತ್ತ ಬಂದಿದ್ದ ಅವರು ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಣೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಸಚಿನ್ ಪತ್ತೆಯಾಗಿದ್ದರು. ತಕ್ಷಣ ಸ್ಥಳೀಯರು ಅವರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಹಣೆಗೆ ಗಾಯಗೊಂಡ ರೀತಿ ಕಂಡುಬಂದಿದ್ದರಿಂದ ಯಾರೋ ಹೊಡೆದು ಹೋಗಿರಬೇಕೆಂದು ಶಂಕೆ ವ್ಯಕ್ತವಾಗಿದ್ದು ಸಾವಿನ ಬಗ್ಗೆ ಸಂಶಯಿಸಿ ಮನೆಯವರು ಪೊಲೀಸ್ ದೂರು ನೀಡಿದ್ದಾರೆ.

ಪೊಲೀಸರು ಸ್ಥಳದಲ್ಲಿ ಆಸುಪಾಸಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂತಹ ಯಾವುದೇ ಕೃತ್ಯದ ಸುಳಿವು ದೊರೆತಿಲ್ಲ ಎನ್ನಲಾಗುತ್ತಿದೆ. ಹಣೆಗೆ ಗಾಯವಾಗಿದ್ದು ಹೌದು. ಹೃದಯಾಘಾತದಿಂದ ಕುಸಿದು ಬಿದ್ದು ರಸ್ತೆಯ ಕಾಂಕ್ರೀಟ್ ತಾಗಿ ಗಾಯವಾಗಿರುವ ಸಾಧ್ಯತೆಯಿದೆ. ಪೋಸ್ಟ್ ಮಾರ್ಟಂ ವರದಿಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸ್ಥಳೀಯರು ಸಾವಿನ ಬಗ್ಗೆ ಸಂಶಯಿಸಿದ್ದು ಅದೇ ವೇಳೆಗೆ ಯಾವುದೋ ಸ್ವಿಫ್ಟ್ ಕಾರು ಬಂದಿದೆ. ನಾಲ್ಕು ನಿಮಿಷದಲ್ಲಿ ಘಟನೆ ನಡೆದು ಹೋಗಿತ್ತು.