ಹಾಡಹಗಲೇ ಏಳರ ಅನಾಥ ಬಾಲಕಿಯನ್ನು ಆಟೋದಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನ: ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು



ತುಮಕೂರು: ಕಾಮುಕನೊಬ್ಬ ಹಾಡಹಗಲೇ ಏಳು ವರ್ಷದ ಬಾಲಕಿಯನ್ನು ಆಟೋದಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗಲೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ.

ತುಮಕೂರಿನ ಶಾಂತಿನಗರದ ಗೂಡ್​​ಶೆಡ್ ಕಾಲನಿ ನಿವಾಸಿ ಶಫಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ. ವೃತ್ತಿಯಿಂದ ಆಟೋಚಾಲಕನಾಗಿರುವ ಈತ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್​ ನಿಲ್ದಾಣ ಬಳಿ ಓಡಾಡುತ್ತಿದ್ದ 7 ವರ್ಷದ ಬಾಲಕಿಯನ್ನು ಪುಸಲಾಯಿಸಿ ತನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾನೆ.

ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಆರೋಪಿಯನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದ ಸಾರ್ವಜನಿಕರು, ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರಿನ ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮತ್ತು ಆತನ ಆಟೋ ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತ ವಯಸ್ಸಿನ ಈ ಬಾಲಕಿ ಅನಾಥೆಯಾಗಿದ್ದು, ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಳು. ಅತ್ಯಾಚಾರ ಯತ್ನದಿಂದ ರಕ್ಷಿಸಲಾದ ಬಾಲಕಿಯನ್ನು ತುಮಕೂರಿನ ಬಾಲಮಂದಿರಕ್ಕೆ ಕರೆದೊಯ್ದು ಬಿಡಲಾಗಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಅನಾಥ ಬಾಲಕಿಯ ಮಾನ ಉಳಿದಿದೆ.
BREAKING NEWS
Loading latest news...
Join our WhatsApp Channel Powered By : Online Pudu