ಶೋರೂಂನಿಂದಲೇ ಕೆಟಿಎಂ ಡ್ಯೂಕ್ ಬೈಕ್ ಕಳವುಗೈದ ಖತರ್ನಾಕ್ ಕಳ್ಳ: ಪೆಟ್ರೋಲ್ ಬಂಕ್ ನಲ್ಲಿ ಗೂಗಲ್ ಪೇ ತಂತ್ರ ಹೂಡಿ ಸಿಕ್ಕಿಬಿದ್ದ ಯುವಕ

ಕೊಚ್ಚಿ: ಶೋರೂಮ್​ನಿಂದಲೇ ಕೆಟಿಎಂ ಡ್ಯೂಕ್​ ಬೈಕೊಂದನ್ನು ಕದ್ದು ಪರಾರಿಯಾಗುತ್ತಿದ್ದ ಕೇರಳದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

ಕುರುವತ್ತೂರು ಮೂಲದ ನಿವಾಸಿ ಕಿರಣ್​ ಚಾಂದ್​ (27) ಬಂಧಿತ ಯುವಕ. ಈತ ಮಲಪ್ಪುರಂ ಜಿಲ್ಲೆಯ ನಡಕ್ಕಾವು ಪಟ್ಟಣದ ಶೋರೂಮ್​ನಲ್ಲಿ ಬೈಕ್​ ಕದ್ದು ಪರಾರಿಯಾಗುತ್ತಿದ್ದ.

ಆರೋಪಿ ಕಿರಣ್ ಬೈಕ್ ತೆಗೆದುಕೊಂಡು ಪಾಳೆಯಡ್ನಾಡ್ ಬಳಿಯ ಪೆಟ್ರೋಲ್ ಬಂಕ್​ಗೆ ತೆರಳಿದ್ದನು. ಆದರೆ, ಪೆಟ್ರೋಲ್​ ತುಂಬಿಸಿಕೊಳ್ಳಲು ಆತನಲ್ಲಿ ಹಣವಿರಲಿಲ್ಲ. ಆದ್ದರಿಂದ ಮತ್ತೊಂದು ತಂತ್ರ ಅನುಸರಿಸಿದ ಕಿರಣ್​, ಬೈಕ್ ಗೆ ಪೆಟ್ರೋಲ್ ತುಂಬಿಸಿ,​ ಬಂಕ್ ನೌಕರನ ಮೇಲೆ ಹಲ್ಲೆಗೈದು ಬೈಕ್‌ನಲ್ಲಿ ವೇಗವಾಗಿ ಎಸ್ಕೇಪ್​ ಆಗಲು ಯತ್ನಿಸಿದ್ದಾನೆ. 

ಪೆಟ್ರೋಲ್​ ಬಂಕ್​ನಲ್ಲಿ ಇಂಧನ ತುಂಬಿದ ಬಳಿಕ ಆರೋಪಿ ಕಿರಣ್, ಗೂಗಲ್ ಪೇ ಮೂಲಕ ಪಾವತಿಸುವುದಾಗಿ ಹೇಳಿದ್ದಾನೆ. ಆದರೆ, ಖಾತೆಗೆ ಹಣ ಬರದಿದ್ದಾಗ ಅನುಮಾನಗೊಂಡು ಬಂಕ್​ ಸಿಬ್ಬಂದಿ ಪ್ರಶ್ನೆ ಮಾಡಿದಾಗ, ಕಿರಣ್​ ನಾಟಕ ಬಯಲಾಗಿದೆ. ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ, ಬಂಕ್​ನ ಒಬ್ಬ ನೌಕರನ ಮೂಗಿನ ಮೇಲೆ ಗುದ್ದಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಸ್ಥಳೀಯರು ಹಾಗೂ ಮತ್ತೊಬ್ಬ ನೌಕರ ಯುವಕನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ವಟಕರ ಠಾಣಾ ಪೊಲೀಸರಿಗೆ ಒಪ್ಪಿಸಲಾಯಿತು.

ಯುವಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ತಪ್ಪೊಪ್ಪಿಗೆ ಪ್ರಕಾರ ನಡಕ್ಕಾವು ಪಟ್ಟಣದ ಕೆವಿಆರ್​ ಶೋರಂನಲ್ಲಿ ಗ್ರಿಲ್ಸ್ ಮುರಿದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.