ತೆಲಂಗಾಣ: ಗರ್ಭಿಣಿಯೊಬ್ಬರು ಆಕಸ್ಮಿಕವಾಗಿ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಚಂದನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗಂಪಲ್ಲಿ ಗ್ರಾಮದ ವೆಂಕಟ್ ರೆಡ್ಡಿ ಕಾಲನಿಯ, ವೆಂಕಟ್ ರೆಡ್ಡಿ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಇವರ ಪುತ್ರಿ ಶ್ರೀನಿಖಾ ವಿವಾಹ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿತ್ತು. ಅವರೀಗ ಐದು ತಿಂಗಳ ಗರ್ಭಿಣಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಕೊಂಡಾಪುರ ಏರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆಂದು ತವರಿಗೆ ಬಂದಿದ್ದಳು.
ಗುರುವಾರ ಬೆಳಗ್ಗೆ 7.10ಕ್ಕೆ ಎದ್ದಿದ್ದ ಶ್ರೀನಿಖಾ ವಾಕಿಂಗ್‌ಗೆಂದು ಬಾಲ್ಕನಿಗೆ ಬಂದಿದ್ದರು. ಸ್ವಲ್ಪ ಹೊತ್ತಿನಲ್ಲಿ ಅವರು ಕಣ್ಣುಗಳು ಮಂಜಾಗುತ್ತಿದೆಯೆಂದು ಹೇಳಿ ಮನೆಯೊಳಗೆ ಹೋಗುತ್ತಿದ್ದರು. ಆದರೆ ಅಷ್ಟರಲ್ಲೇ ಶ್ರೀನಿಖಾ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಕುಟುಂಬಸ್ಥರು ಮದೀನಗುಡಾದ ಶ್ರೀಕರ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಚಂದಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿಯ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.