ವಿವಾಹವಾಗು ಎಂದು ಒತ್ತಾಯಿಸಿದ ಪ್ರಿಯತಮೆಯನ್ನು ಕೊಲೆಮಾಡಿ ಮ್ಯಾನ್ ಹೋಲ್ ಗೆಸೆದ ಅರ್ಚಕ
Friday, June 9, 2023
ಹೈದರಾಬಾದ್: ಅರ್ಚಕನೊಬ್ಬ ತನ್ನ ಪ್ರೇಯಸಿಯನ್ನೇ ಹತ್ಯೆ ಮಾಡಿ ಆಕೆಯ ಮೃತದೇಹವನ್ನು ಮ್ಯಾನ್‌ಹೋಲ್‌ನೊಳಗಡೆ ಎಸೆದಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಬಾದ್ ನಲ್ಲಿ ನಡೆದಿದೆ.
ಶಂಶಾಭಾದ್‌ನಲ್ಲಿರುವ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕ ವೆಂಕಟಸೂರ್ಯ ಸಾಯಿಕೃಷ್ಣ(36) ಕೊಲೆ ಆರೋಪಿ. ಕುರುಗಂಟೆ ಅಪ್ಸರಾ(30) ಮೃತಪಟ್ಟ ದುರ್ದೈವಿ.
ವೃತ್ತಿಯಲ್ಲಿ ಅರ್ಚಕನೂ ಬಿಲ್ಡರ್ ಆಗಿ ಕೆಲಸ ಮಾಡುತ್ತಿರುವ ಸಾಯಿಕೃಷ್ಣನಿಗೆ ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಆರೋಪಿ ಅಪ್ಸರಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಈ ನಡುವೆ ಮೊದಲ ಪತ್ನಿಗೆ ವಿಚ್ಛೇದನ ನೀಡಿ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ದಿನದಿಂದ ದಿನಕ್ಕೆ ಅಪ್ಸರಾ ಒತ್ತಡ ಹೆಚ್ಚುತ್ತಿದ್ದಂತೆ ಸಾಯಿಕೃಷ್ಣ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಮೊದಲಿಗೆ ಅಪ್ಸರಾಳನ್ನು ಮಾತನಾಡುವ ನೆಪದಲ್ಲಿ ಭೇಟಿ ಮಾಡಿದ ಆರೋಪಿಯೂ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಮ್ಯಾನ್‌ಹೋಲ್ ಒಳಗೆ ಎಸೆದಿದ್ದಾನೆ. ಬಳಿಕ ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಮೃತಳ ಮನೆಗೆ ಹೋಗಿ ಪೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿ ಆಕೆಯ ಪೋಷಕರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾನೆ. ಅದರಂತೆ ಅಪ್ಸರಾ ತಂದೆ-ತಾಯಿ ತಮ್ಮ ಪುತ್ರಿ ನಾಪತ್ತೆಯಾಗಿರುವ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಆಕೆಯ ನಂಬರ್ ಟ್ರೇಸ್ ಮಾಡಿದ್ದಾರೆ. ಬಳಿಕ ನಂಬರ್ ಕಡೆಯದಾಗಿ ಪತ್ತೆಯಾದ ಸ್ಥಳಕ್ಕೆ ಹೋಗಿ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಆರೋಪಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಾಯಿಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.