ಆಂಧ್ರ ಮಾಜಿ‌ ಸಿಎಂ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸೇರ್ಪಡೆ

ಹೊಸದಿಲ್ಲಿ: ಆಂಧ್ರಪ್ರದೇಶ ರಾಜ್ಯದ ಸಿಎಂ ಕಿರಣ್ ಕುಮಾರ್ ರೆಡ್ಡಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೊಸದಿಲ್ಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ನಾಯಕರಾದ ಅರುಣ್ ಸಿಂಗ್, ಸಚಿವ ಪ್ರಹ್ಲಾದ್ ಜೋಶಿಯವರು ಕಿರಣ್ ಕುಮಾರ್ ರೆಡ್ಡಿಯವರನ್ನು ಬಿಜೆಪಿಗೆ ಬರ ಮಾಡಿಕೊಂಡಿದ್ದಾರೆ.

2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾಗುವ ಮೊದಲು ಅವಿಭಜಿತ ಆಂಧ್ರಪ್ರದೇಶದ ಕೊನೆಯ ಸಿಎಂ ಆಗಿದ್ದ ಕಿರಣ್ ಕುಮಾರ್ ರೆಡ್ಡಿ, ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದ ಈ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಮುಂದಿನ ವರ್ಷ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಲು ಕಿರಣ್ ಕುಮಾರ್ ರೆಡ್ಡಿ ನಿರ್ಧಾರ ಕೈಗೊಂಡಿದ್ದರು. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪ್ರಮುಖ ಪ್ರತಿಪಕ್ಷ ತೆಲುಗು ದೇಶಂ ಪಕ್ಷ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

62ರ ಹರೆಯದ ಕಿರಣ್ ಕುಮಾರ್ ರೆಡ್ಡಿ 2014ರಲ್ಲಿಯೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ 'ಜೈ ಸಮೈಯ್ಯಂದ್ರ' ಎಂಬ ತಮ್ಮದೇ ಪಕ್ಷವನ್ನು ಕಟ್ಟಿದ್ದರು. ಆದರೆ 2014ರ ಚುನಾವಣೆಯಲ್ಲಿ ಯಾವುದೇ ಚುನಾವಣಾ ಪ್ರಭಾವ ಬೀರಲು ವಿಫಲರಾಗಿದ್ದರು. ನಂತರ ಅವರು 2018 ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಸೇರಿದ್ದರು. ಆದರೆ ದೀರ್ಘಕಾಲ ರಾಜಕೀಯದಲ್ಲಿ ನಿಷ್ಕ್ರಿಯರಾಗಿದ್ದರು.