-->

ದೈಹಿಕ ಸಂಬಂಧ ಬೆಳೆಸುವ ಆಸೆ ತೋರಿಸಿ ಮನೆಗೆ ಕರೆಸಿ ಹನಿಟ್ರ್ಯಾಪ್: ಮಹಿಳೆಯರಿಬ್ಬರು ಸೇರಿ ಆರು ಮಂದಿ ಅರೆಸ್ಟ್‌

ದೈಹಿಕ ಸಂಬಂಧ ಬೆಳೆಸುವ ಆಸೆ ತೋರಿಸಿ ಮನೆಗೆ ಕರೆಸಿ ಹನಿಟ್ರ್ಯಾಪ್: ಮಹಿಳೆಯರಿಬ್ಬರು ಸೇರಿ ಆರು ಮಂದಿ ಅರೆಸ್ಟ್‌


ಬೆಂಗಳೂರು: ಖಾಸಗಿ ಕಂಪೆನಿಯ ಉದ್ಯೋಗಿಯನ್ನು ದೈಹಿಕ ಸಂಬಂಧ ಬೆಳೆಸುವ ಆಸೆ ಹುಟ್ಟಿಸಿ ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡಿರುವ ಮಹಿಳೆಯರಿಬ್ಬರು ಸೇರಿದಂತೆ ಆರು ಮಂದಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಯಾಚೇನಹಳ್ಳಿಯ ವೈ.ಎಂ. ಅನಿಲ್‌ಕುಮಾರ್ (37), ಮೈಸೂರು ರಸ್ತೆ ಬ್ಯಾಟರಾಯನಪುರದ ಶಿವಶಂಕರ್ (50), ಕುಣಿಗಲ್ ತಾಲೂಕು ನೊರಜನಕುಪ್ಪೆಯ ಗಿರೀಶ್ (36) ಮತ್ತು ರಾಜಾಜಿನಗರದ ರಾಮಮೂರ್ತಿ (37) ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಕಂಪನಿಯ ಉದ್ಯೋಗಿಗೆ ವೆಬ್‌ಸೈಟ್‌ನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಪರಿಚಯ ಆಗಿದ್ದಾಳೆ. ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದಾರೆ. ಆ ಬಳಿಕ ಚಾಟ್ ಶುರು ಮಾಡಿ ಅರೆಬೆತ್ತಲೆ ಫೋಟೋಗಳನ್ನು ಕಳುಹಿಸಿ ದೈಹಿಕ ಸಂಪರ್ಕ ಬೆಳೆಸಲು ದೂರುದಾರ‌ ವ್ಯಕ್ತಿಗೆ ಮಹಿಳೆ ಆಹ್ವಾನಿಸಿದ್ದಾಳೆ. ಅದಕ್ಕೆ ಒಪ್ಪಿಕೊಂಡ ದೂರುದಾರ, ಬೇಗೂರಿನ ದೇವರಚಿಕ್ಕನಹಳ್ಳಿ ರಾಯಲ್ ಶೆಲ್ಟರ್ಸ್ ಲೇಔಟ್‌ನಲ್ಲಿದ್ದ ಮಹಿಳೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಬೆಡ್ ರೂಮ್‌ನಲ್ಲಿ ದೂರುದಾರ ಕುಳಿತಿದ್ದಾಗ ಇತರ ಆರೋಪಿಗಳು ಏಕಾಏಕಿ ಒಳಗೆ ನುಗ್ಗಿ ಅರೆಬೆತ್ತಲೆ ಮಾಡಿ ಆತನ ಫೋಟೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ.

ಅಲ್ಲದೆ ಮಹಿಳೆ ಜೊತೆಗಿದ್ದ ಪೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಕೊನೆಗೆ 3 ಲಕ್ಷ ರೂ.ಗೆ ಒಪ್ಪಿಕೊಂಡು ಸ್ನೇಹಿತರ ಮೂಲಕದ ಫೋನ್ ಪೇ ಮತ್ತು ಗೂಗಲ್ ಪೇನಲ್ಲಿ 2.90 ಲಕ್ಷ ರೂ. ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದ. ಇದಾದ ಮೇಲೆ ದೂರುದಾರ ತನ್ನ ಬಳಿಯಿದ್ದ 10 ಸಾವಿರ ರೂ. ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾನೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದಲ್ಲಿ ಮಹಿಳೆಯೊಂದೊಗಿದ್ದ ಫೋಟೋಗಳನ್ನು ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಸಿದ್ದರು.

ಆತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಚ್.ಡಿ. ಅನಿಲ್‌ಕುಮಾರ್ ನೇತೃತ್ವದ ತಂಡ ಆರೋಪಿಗಳ ಕುರಿತ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲಸ ಇಲ್ಲದೆ ಸುತ್ತಾಡುತ್ತಿದ್ದ ಆರೋಪಿಗಳು ಮತ್ತು ಮಹಿಳೆಯೊಂದಿಗೆ ಸೇರಿಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಇದೇ ರೀತಿ ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article