ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿದ ನಪಂ ಜೂನಿಯರ್ ಇಂಜಿನಿಯರ್ ಗೆ 4ವರ್ಷ ಸಾದಾ ಸಜೆ - 26‌.50 ಲಕ್ಷ ರೂ. ದಂಡ


ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿದ ಮುಲ್ಕಿ ನಗರ ಪಂಚಾಯತ್ ಜೂನಿಯರ್ ಇಂಜಿನಿಯರ್ ಮೇಲೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗೆ 4ವರ್ಷ ಸಾದಾ ಸಜೆ ಹಾಗೂ 26.50 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ‌.

ಮುಲ್ಕಿ ನಗರ ಪಂಚಾಯತ್ ಜೂನಿಯರ್ ಇಂಜಿನಿಯರ್ ಪದ್ಮನಾಭ.ಎನ್.ಕೆ. ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಠಾಣಾ ಪೊಲೀಸರು 2015ರ ಫೆಬ್ರವರಿ ಸಂದರ್ಭ ದಾಳಿ ನಡೆಸಿದ್ದರು. ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕ ಲೋಕಾಯುಕ್ತ ಮಂಗಳೂರು ಠಾಣಾ ಪೊಲೀಸ್ ನಿರೀಕ್ಷಕ ನವೀನ್‌ ಚಂದ್ರ ಜೋಗಿ ಈ ಪ್ರಕರಣದ ತನಿಖೆ ನಡೆಸಿದ್ದರು. ಭಾರತಿ ಜಿ. ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿಯವರು ವಿಚಾರಣೆ ನಡೆಸಿ ಪದ್ಮನಾಭ ಎನ್.ಕೆ. ಮೇಲಿನ ಆರೋಪ ಸಾಬೀತಾಗಿದೆ ಎಂದು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಾಧಿಗೆ 4 ವರ್ಷ ಸಾದಾ ಸಜೆ ಹಾಗೂ 26.50 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲನಾದಲ್ಲಿ ಮತ್ತೆ ಆರು ತಿಂಗಳ ಕಾಲ ಸಾದಾ ಸಜೆ ವಿಧಿಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. 

ಸರ್ಕಾರದ ಪರವಾಗಿ ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ  ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿರುತ್ತಾರೆ.
BREAKING NEWS
Loading latest news...
Join our WhatsApp Channel Powered By : Online Pudu