-->
ಪುತ್ರ - ಸೊಸೆ ಮೇಲೆ ಮುನಿಸು: 1.50 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿಗಳನ್ನು ರಾಜ್ಯಪಾಲರಿಗೆ ನೀಡಿದ ವೃದ್ಧ

ಪುತ್ರ - ಸೊಸೆ ಮೇಲೆ ಮುನಿಸು: 1.50 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿಗಳನ್ನು ರಾಜ್ಯಪಾಲರಿಗೆ ನೀಡಿದ ವೃದ್ಧ


ಮುಜಾಫರ್‌ನಗರ: ಪುತ್ರ ಹಾಗೂ ಸೊಸೆಯ ಮೇಲೆ ಮುನಿಸಿಕೊಂಡ ವೃದ್ಧರೊಬ್ಬರು 1.50 ಕೋಟಿ ರೂ‌ ಮೌಲ್ಯದ ತಮ್ಮ ಸ್ಥಿರಾಸ್ತಿಗಳನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿರುವ ಘಟನೆ ಮುಜಾಫರ್‌ನಗರದಲ್ಲಿ ವರದಿಯಾಗಿದೆ. ಪುತ್ರ ಹಾಗೂ ಸೊಸೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ತನ್ನ ಆಸ್ತಿಗಳನ್ನು ಉತ್ತರಾಧಿಕಾರಿಗಳಿಗೆ ನೀಡಲು ಬಯಸುವುದಿಲ್ಲ ಎಂದು 80 ವರ್ಷದ ನಾತು ಸಿಂಗ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮುಜಾಫರ್‌ನಗರದ ಬಿರಲ್ ಗ್ರಾಮದ ನಿವಾಸಿ ನಾತು ಸಿಂಗ್, ಪ್ರಸ್ತುತ ಅವರು ವೃದ್ಧಾಶ್ರಮವೊಂದರಲ್ಲಿ ವಾಸವಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. "ನನ್ನ ಯಾವ ಮಕ್ಕಳಿಗೂ ಈ ಆಸ್ತಿಯ ಉತ್ತರಾಧಿಕಾರತ್ವ ನೀಡಲು ಬಯಸುವುದಿಲ್ಲ. ಆದ್ದರಿಂದ ಮರಣದ ಬಳಿಕ ಈ ಎಲ್ಲ ಆಸ್ತಿಗಳನ್ನು ಉತ್ತರ ಪ್ರದೇಶದ ರಾಜ್ಯಪಾಲರಿಗೆ ನೀಡುವ ಸಂಬಂಧ ಅಫಿಡವಿಟ್ ಸಲ್ಲಿಸಿದ್ದೇನೆ'' ಎಂದು ಸ್ಪಷ್ಟಪಡಿಸಿದ್ದಾರೆ.

ಈ ಭೂಮಿಯಲ್ಲಿ ಸರಕಾರಿ ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಬೇಕು ಎನ್ನುವುದು ಅವರ ಬಯಕೆಯಾಗಿದೆ. "ಈ ವಯಸ್ಸಿನಲ್ಲಿ ತಾನು ಪುತ್ರ ಹಾಗೂ ಸೊಸೆಯೊಂದಿಗೆ ವಾಸವಿರಬೇಕಿತ್ತು. ಆದರೆ ಅವರು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಕಾರಣದಿಂದ ಆಸ್ತಿಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಅವರು ಅದನ್ನು ಸಮರ್ಪಕವಾಗಿ ಬಳಸಲಿ' ಎಂದು ಸಿಂಗ್ ಹೇಳಿದ್ದಾರೆ.

ನಾತು ಸಿಂಗ್ ಅವರು ತಮ್ಮ ಅಂತ್ಯಸಂಸ್ಕಾರದಲ್ಲಿ ಕೂಡಾ ಕುಟುಂಬದವರು ಯಾರೂ ಪಾಲ್ಗೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ವೃದ್ಧಾಶ್ರಮದ ಉಸ್ತುವಾರಿ ಹೊಂದಿರುವ ರೇಖಾ ಸಿಂಗ್ ವಿವರಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article