ರ್ಯಾಗಿಂಗ್‌ನಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ: ವಾಟ್ಸ್ಆ್ಯಪ್ ನಿಂದ ಸೀನಿಯರ್ ವಿದ್ಯಾರ್ಥಿ ಕೃತ್ಯ ಬಯಲು


ಹೈದರಾಬಾದ್: ಆತ್ಮಹತ್ಯೆಗೆ ಯತ್ನಿಸಿದ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಪ್ರಥಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ರವಿವಾರ ರಾತ್ರಿ ಮೃತಪಟ್ಟಿದ್ದಾಳೆ.

ಕಾಕತೀಯ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಪ್ರೀತಿ(26) ಮೃತಪಟ್ಟವಳು. ಹಿರಿಯ ವಿದ್ಯಾರ್ಥಿಯ ರ್ಯಾಗಿಂಗ್ ನಿಂದ ಮನನೊಂದಿದ್ದ ಪ್ರೀತಿ ಕಳೆದ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಳಾಗಿದ್ದ ಆಕೆಯನ್ನು ಆರಂಭದಲ್ಲಿ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಆಕೆಯ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ರವಿವಾರ ಆಕೆ ಕೊನೆಯುಸಿರೆಳೆದಿದ್ದಾಳೆ.

ಈ ಹಿನ್ನೆಲೆಯಲ್ಲಿ ಪ್ರೀತಿಯ ತಂದೆ ನೀಡಿದ ದೂರಿನನ್ವಯ ದ್ವಿತೀಯ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ ಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ರ್ಯಾಗಿಂಗ್, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಹಾಗೂ ಆರೋಪಿಯ ವಾಟ್ಸ್ ಆ್ಯಪ್ ಚಾಟ್‌ಗಳು ರ್ಯಾಗಿಂಗ್ ನಡೆದಿರುವುದನ್ನು ಸೂಚಿಸುತ್ತಿವೆ ಎಂದು ವಾರಂಗಲ್ ಪೊಲೀಸ್ ಕಮಿಷನರ್ ಎವಿ ರಂಗನಾಥ್ ತಿಳಿಸಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಎಸ್‌ಸಿ/ಎಸ್‌ಟಿ ರಾಷ್ಟ್ರೀಯ ಆಯೋಗವು ಸರ್ಕಾರ, ಎಂಜಿಎಂ ಆಸ್ಪತ್ರೆಯ ಸೂಪರಿಂಟೆಂಡೆಂಟ್, ಪ್ರಾಂಶುಪಾಲರು ಮತ್ತು ಪ್ರೀತಿ ವಿದ್ಯಾರ್ಥಿನಿಯಾಗಿದ್ದ ಅರಿವಳಿಕೆ ವಿಭಾಗದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ. ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಆಸ್ಪತ್ರೆಗೆ ಭೇಟಿ ನೀಡಿ ಪ್ರೀತಿ ಕುಟುಂಬಕ್ಕೆ ಸಾಂತ್ವಾನ ಹೇಳಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu